ಮಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ನಡೆಯುತ್ತಿರುವ ಶವ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು, ದೂರುದಾರ ತೋರಿಸಿದ 11ನೇ ಮತ್ತು 12ನೇ ಪಾಯಿಂಟ್‌ಗಳಲ್ಲಿ ಉತ್ಖನನ ಕಾರ್ಯ ನಡೆಸಿದರೂ ಯಾವುದೇ ಅಸ್ಥಿಪಂಜರ ಅಥವಾ ಕಳೇಬರದ ಅವಶೇಷಗಳು ಪತ್ತೆಯಾಗಿಲ್ಲ.
ಧರ್ಮಸ್ಥಳದ ಕಾಡಿನಲ್ಲಿ ಶವಗಳನ್ನು ಹೂತಿರುವ ಬಗ್ಗೆ ದೂರುದಾರರಿಂದ ಮಾಹಿತಿ ಸಿಕ್ಕಿದ ನಂತರ ಎಸ್‌ಐಟಿ ತಂಡವು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದೆ. ಈ ಹಿಂದೆ ಜುಲೈ 31 ರಂದು ಆರನೇ ಗುರುತು ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಆಗಸ್ಟ್ 1 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಯುಡಿಆರ್ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಅವಶೇಷಗಳನ್ನು ಫಾರೆನ್ಸಿಕ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ನಿನ್ನೆ ದೂರುದಾರ ಎಸ್‌ಐಟಿ ತಂಡವನ್ನು ಗುಡ್ಡದ ಮೇಲಿನ ಭಾಗಕ್ಕೆ ಕರೆದೊಯ್ದು, ಅಲ್ಲಿ ಮನುಷ್ಯನ ಮೂಳೆಗಳು ಸಿಕ್ಕಿವೆ ಎಂದು ಆರೋಪಿಸಿದ್ದರು. ಆದರೆ, ಇಂದು 11ನೇ ಸ್ಥಳದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ 6 ಅಡಿ ಗುಂಡಿಯನ್ನು ಅಗೆದರೂ ಯಾವುದೇ ಅವಶೇಷಗಳು ಸಿಕ್ಕಿಲ್ಲ. ಕೊನೆಗೆ ಹಿಟಾಚಿ ಯಂತ್ರದ ಮೂಲಕ ಗುಂಡಿಯನ್ನು ಮುಚ್ಚಲಾಯಿತು. ಇದೇ ರೀತಿ 12ನೇ ಪಾಯಿಂಟ್‌ನಲ್ಲಿ ಮಧ್ಯಾಹ್ನದ ನಂತರ ಉತ್ಖನನ ಕಾರ್ಯ ಆರಂಭವಾಯಿತು. ಆದರೆ, ಜೋರಾಗಿ ಮಳೆ ಬಂದ ಕಾರಣ ಕಾರ್ಯಾಚರಣೆಗೆ ತೊಂದರೆಯಾಯಿತು. ಸುಮಾರು 1.30 ಗಂಟೆಗಳ ಕಾಲ 6 ಅಡಿ ಗುಂಡಿಯನ್ನು ತೋಡಿದರೂ ಯಾವುದೇ ಕಳೇಬರ ಸಿಗಲಿಲ್ಲ.