ಮೈಸೂರು: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಟಿ.ನರಸೀಪುರ ತಾಲೂಕಿನ ತುರುಗನೂರು ಗ್ರಾಮದ ಕುಮಾರ್ (39) ಮೃತ ವ್ಯಕ್ತಿ. ಜುಲೈ 19ರಂದು ಮೈಸೂರಿನಲ್ಲಿ ನಡೆದ ಸಮಾವೇಶಕ್ಕೆ ಕುಮಾರ್ ಅವರನ್ನು ಗ್ರಾಮದ ಕಾಂಗ್ರೆಸ್ ಮುಖಂಡರು 300 ರೂಪಾಯಿ ನೀಡಿ ಕರೆತಂದಿದ್ದರು. ಆದರೆ, ಸಮಾವೇಶ ಮುಗಿದ ನಂತರ ಕುಮಾರ್ ಮನೆಗೆ ವಾಪಸಾಗಲಿಲ್ಲ.
ಕುಮಾರ್‌ನ ಕುಟುಂಬಸ್ಥರು ರಾತ್ರಿಯಾದರೂ ಅವರು ಮನೆಗೆ ಬಾರದಿದ್ದಾಗ ಗಾಬರಿಗೊಂಡಿದ್ರು. ಕುಟುಂಬಸ್ಥರು ತಕ್ಷಣವೇ ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು. ಆದರೆ, ಬನ್ನೂರು ಪೊಲೀಸರು, ಮೈಸೂರು ನಗರ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು. ಕುಟುಂಬದವರು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿದಾಗ, ಇಂದು ಮೈಸೂರಿನ ಶವಾಗಾರದಲ್ಲಿ ಕುಮಾರ್‌ನ ಮೃತದೇಹ ಪತ್ತೆಯಾಯಿತು. ತನಿಖೆಯಿಂದ ಕುಮಾರ್ ಅತಿಯಾದ ಮದ್ಯಪಾನದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸಮಾವೇಶಕ್ಕೆ ಕರೆತಂದವರಿಂದಲೇ ಈ ದುರ್ಘಟನೆಗೆ ಕಾರಣ ಎಂದು ಕುಮಾರ್‌ನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾವೇಶಕ್ಕೆ ಜನರನ್ನು ಆಕರ್ಷಿಸಲು ಹಣದ ಆಮಿಷ ಒಡ್ಡಿರುವುದು, ಮತ್ತು ಸಮಾವೇಶದ ನಂತರ ಭಾಗವಹಿಸಿದವರ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ವಹಿಸದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಕುಮಾರ್‌ನ ಕುಟುಂಬವು ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದೆ. ಅವರ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.





