ಬೆಂಗಳೂರು : ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೇಲೆ ನಿಷೇಧ ಹೇರಲು ತೀರ್ಮಾನಿಸುವುದಾಗಿ ತಂತ್ರಜ್ಞಾನ ಮತ್ತು ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಸಿದ್ಧಾಂತಗಳನ್ನು ತೀವ್ರವಾಗಿ ಟೀಕಿಸಿರುವ ಅವರು, ಸಂವಿಧಾನದ ಜಾತ್ಯಾತೀತತೆ ಮತ್ತು ಸಮಾಜವಾದಿ ತತ್ವಗಳಿಗೆ ಈ ಸಂಘಟನೆಯ ಒಲವಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಮುಖಂಡ ಹೊಸಬಾಳೆ ಅವರ ಹೇಳಿಕೆಯನ್ನು ಉಲ್ಲೇಖಿಸಿದರು. ಸಂವಿಧಾನದಿಂದ “ಜಾತ್ಯಾತೀತ” ಮತ್ತು “ಸಮಾಜವಾದಿ” ಪದಗಳನ್ನು ತೆಗೆಯಬೇಕೆಂದು ಹೊಸಬಾಳೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, “ಆರ್‌ಎಸ್‌ಎಸ್‌ಗೆ ಜಾತ್ಯಾತೀತತೆ, ಸಮಾನತೆ, ಮತ್ತು ಆರ್ಥಿಕ ಸಮಾನತೆಯ ಬಗ್ಗೆ ಅಲರ್ಜಿ ಇದೆ. ಈ ಸಂಘಟನೆಯ ಸಿದ್ಧಾಂತವು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ,” ಎಂದು ತಿಳಿಸಿದರು.
“ನಾವು ಈ ಹಿಂದೆ ಎರಡು ಬಾರಿ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದೇವೆ. ಆಗ ಅವರು ನಮ್ಮ ಕೈಕಾಲು ಹಿಡಿದು ನಿಷೇಧ ತೆಗೆಯಲು ಮನವಿ ಮಾಡಿದ್ದರು. ಆದರೆ, ನಿಷೇಧ ತೆಗೆದಿದ್ದೇ ತಪ್ಪಾಯಿತು. ಮುಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ, ಆರ್‌ಎಸ್‌ಎಸ್‌ನ ಮೇಲೆ ನಿಷೇಧ ಹೇರಲು ಚಿಂತಿಸುವೆವು,” ಎಂದು ಖರ್ಗೆ ಎಚ್ಚರಿಕೆ ನೀಡಿದರು. ಈ ಹೇಳಿಕೆಯ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್‌ಗೆ ಕಠಿಣ ಕಾನೂನು ಕ್ರಮದ ಸುಳಿವು ನೀಡಿದ್ದಾರೆ.
ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿರೋಧಿಸುವುದರ ಬಗ್ಗೆ ಮಾತನಾಡಿದ ಖರ್ಗೆ, “ಈ ಸಂಘಟನೆಯು ಯಾವಾಗಲೂ ಸಂವಿಧಾನದ ವಿರುದ್ಧವಾಗಿ ನಿಂತಿದೆ. ಜಾತ್ಯಾತೀತತೆ ಮತ್ತು ಸಮಾಜವಾದದಂತಹ ಪದಗಳಿಗೆ ಇವರಿಗೆ ಏಕೆ ತಾಕಲಾಟ? ಇವರ ಸಿದ್ಧಾಂತದಲ್ಲಿ ಒಂದೇ ಧರ್ಮ ಆಧಿಪತ್ಯ ಸ್ಥಾಪಿಸುವ ಉದ್ದೇಶವಿದೆ. ಆದರೆ, ನಾವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ,” ಎಂದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿದ ಖರ್ಗೆ ಅವರು, “ಅಂಬೇಡ್ಕರ್ ಸಂವಿಧಾನವನ್ನು ಜೀವಂತ ದಾಖಲೆ ಎಂದು ಕರೆದಿದ್ದಾರೆ. ಕಾಲಕಾಲಕ್ಕೆ ಜನರ ಆಶಯಕ್ಕೆ ತಕ್ಕಂತೆ ಅದನ್ನು ಬದಲಾಯಿಸಬಹುದು. ಆರ್‌ಎಸ್‌ಎಸ್‌ಗೆ ಈ ಅರಿವು ಇದೆಯೇ? ಇವರು 370ನೇ ವಿಧಿಯನ್ನು ತೆಗೆದುಹಾಕಿದರು, ಆದರೆ 371j ತಿದ್ದುಪಡಿಯನ್ನು ನಾವು ತಂದಿದ್ದೇವೆ. ಇವರಿಗೆ ಸಂವಿಧಾನದ ಮೂಲಭೂತ ತಿಳುವಳಿಕೆ ಇದೆಯೇ?” ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್‌ನ ಇತಿಹಾಸವನ್ನು ಟೀಕಿಸಿದ ಖರ್ಗೆ ಅವರು, “ಈ ಸಂಘಟನೆಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಈಗ ತಮ್ಮದೇ ಆದ ಇತಿಹಾಸವನ್ನು ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅವರು ಮೊದಲು ಅಂಬೇಡ್ಕರ್ ಅವರ ಕೃತಿಗಳನ್ನು ಓದಿಕೊಳ್ಳಲಿ,” ಎಂದು ಸವಾಲು ಹಾಕಿದರು.
ಅಂಬೇಡ್ಕರ್ ವಿರೋಧಿಗಳಾಗಿರುವ ಆರ್‌ಎಸ್‌ಎಸ್‌ನವರು ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಖರ್ಗೆ ಹೇಳಿದರು. “ನಾನು ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ ಮತ್ತು ಬಿಜೆಪಿಗೆ ದಾಖಲೆಗಳನ್ನು ಒದಗಿಸಿದ್ದೇನೆ. ಆದರೆ, ಅವರು ವಿಷಯವನ್ನು ತಪ್ಪಿಸುವ ಕೆಲಸ ಮಾಡುತ್ತಾರೆ,” ಎಂದು ಆರೋಪಿಸಿದರು.





