ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದ ಶಿಕ್ಷಕಿಯ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಈ ಘಟನೆಗೆ ಪ್ರೀತಿಯ ನಿರಾಕರಣೆಯೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.
ಬಾಳೆಹೊನ್ನೂರು ಸಮೀಪದ ಚಂದುಹಳ್ಳಿಯ 26 ವರ್ಷದ ಯುವಕ ಭವಿತ್ ಎಂಬಾತನೇ ಈ ಘಟನೆಯ ಆರೋಪಿ. ಶಿಕ್ಷಕಿಯ ಸಂಬಂಧಿಯಾಗಿರುವ ಭವಿತ್, ಕಳೆದ ಎರಡು ತಿಂಗಳಿಂದ ಶಿಕ್ಷಕಿಯೊಂದಿಗೆ ಸಂಪರ್ಕದಲ್ಲಿದ್ದ. ಆದರೆ, ಶಿಕ್ಷಕಿಯು ಆತನ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಭವಿತ್, ಶಿಕ್ಷಕಿಯ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರಿಂದ ಆಕ್ರೋಶಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಿನ್ನೆ ಸಂಜೆ, ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಶಿಕ್ಷಕಿಯು ಶಾಲೆಯ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ, ಭವಿತ್ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ತಲೆಗೆ ತೀವ್ರವಾಗಿ ಹೊಡೆದು, ಆಕೆಯ ಸೀರೆಯನ್ನು ಬಿಚ್ಚಿ, ಅದರಿಂದಲೇ ಆಕೆಯನ್ನು ಮರಕ್ಕೆ ಕಟ್ಟಿ ಕೊಲೆಗೆ ಯತ್ನಿಸಿದ್ದಾನೆ. ಶಿಕ್ಷಕಿಯ ಕೂಗಾಟ ಕೇಳಿ ಸ್ಥಳೀಯರು ಮತ್ತು ಕುಟುಂಬಸ್ಥರು ಧಾವಿಸಿ ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣವೇ ಆಕೆಯನ್ನು ಕೊಪ್ಪದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಘಟನೆಯ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಭವಿತ್‌ನನ್ನು ಬಾಳೆಹೊನ್ನೂರಿನಿಂದ ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಪ್ರೀತಿಯ ನಿರಾಕರಣೆಯಿಂದ ಆರೋಪಿಯು ಈ ಘೋರ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.





