ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಲೋಕಭವನದಲ್ಲಿ ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಬಿದ್ದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯಂತೆ ಈ ನೇಮಕಾತಿ ಜಾರಿಯಾಗಿದ್ದು, ತಕ್ಷಣದಿಂದಲೇ ಅನ್ವಯವಾಗುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯಿಂದ ಬಿಡುಗಡೆಯಾದ ಪ್ರಕಟಣೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹಿ ಹಾಕಿದ್ದು, ಜೂನ್ 3ರ ದಿನಾಂಕದೊಂದಿಗೆ ಈ ಮಹತ್ವದ ಘೋಷಣೆ ಹೊರಬಿದ್ದಿದೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾರು ಮುಂದುವರಿಯಲಿದ್ದಾರೆ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲ ನಾಯಕರು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಮುಂದುವರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ಸಿದ್ಧಾಂತವನ್ನು ಕಟ್ಟುನಿಟ್ಟಾಗಿ ಅನುಸರಿಸಿ ಹೊಸ ಅಧ್ಯಕ್ಷರನ್ನು ನೇಮಿಸುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ.
ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಅನುಭವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯ ರಾಜಕಾರಣದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲೂ ಅವರು ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ದೀರ್ಘಕಾಲದ ನಿಕಟ ಸಂಪರ್ಕ ಹೊಂದಿರುವ ಅವರು, ಪಕ್ಷದ ನಿಷ್ಠಾವಂತ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಗಳಿಂದಲೇ ರಾಜಕೀಯ ಪಯಣ ಆರಂಭಿಸಿದ್ದ ಹರಿಪ್ರಸಾದ್, ಹಲವು ದಶಕಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ರಾಜಕಾರಣದಲ್ಲಿ ಉತ್ತಮ ಅನುಭವ ಹೊಂದಿರುವ ಅವರು, ಪಕ್ಷದ ತಂತ್ರಗಾರಿಕೆ ಮತ್ತು ಸಂಘಟನಾ ಬಲವರ್ಧನೆ ವಿಚಾರಗಳಲ್ಲಿ ಪ್ರಮುಖ ಧ್ವನಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಅವರನ್ನು ರಾಜ್ಯ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯಲು ಹೈಕಮಾಂಡ್ ಆಯ್ಕೆ ಮಾಡಿದೆ ಎನ್ನಲಾಗಿದೆ.
ಇನ್ನೊಂದೆಡೆ, ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಹಾಗೂ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೇವೆಯನ್ನು ಕಾಂಗ್ರೆಸ್ ನಾಯಕತ್ವ ವಿಶೇಷವಾಗಿ ಶ್ಲಾಘಿಸಿದೆ. ಸಂಕಷ್ಟದ ಸಂದರ್ಭಗಳಲ್ಲಿ ಪಕ್ಷವನ್ನು ಸಂಘಟಿಸುವುದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪುನರುಜ್ಜೀವನಕ್ಕೆ ಶ್ರಮಿಸುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದೆ.





