ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ನಗರದಲ್ಲಿನ ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಯತ್ನಿಸಿದ ವೇಳೆ ಈ ಘಟನೆ ನಡೆದಿದೆ.
ಮೆಟ್ರೋ ದರ ಏರಿಕೆಯಿಂದ ದಿನನಿತ್ಯ ಮೆಟ್ರೋ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಪ್ರಯಾಣಿಕರಿಗೆ ಭಾರೀ ಹೊರೆ ಬೀಳಲಿದೆ ಎಂಬ ಆರೋಪದೊಂದಿಗೆ ಬಿಜೆಪಿ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆ ವೇಳೆ ಮೆಟ್ರೋ ನಿಲ್ದಾಣದ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದು ಸ್ಥಳಾಂತರಿಸಿದರು. ಈ ವೇಳೆ ಹಲವು ಬಿಜೆಪಿ ಕಾರ್ಯಕರ್ತರೂ ಸಹ ಬಂಧಿತರಾದರು.
ಬಂಧನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೂಂಡಾಗಳಿಗೂ ನಾನು ಹೆದರಿಲ್ಲ. ನನ್ನದೇ ಕ್ಷೇತ್ರವಾದ ಜಯನಗರದಲ್ಲಿ ನಾನು ಹೆದರುತ್ತೇನೆ ಎಂದು ಯಾರು ಭಾವಿಸಬಾರದು” ಎಂದು ಕಿಡಿಕಾರಿದರು. ಜನರ ಪರವಾಗಿ ಹೋರಾಟ ನಡೆಸುತ್ತಿರುವ ನಮ್ಮನ್ನು ಪೊಲೀಸರು ತಡೆಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನೇ ಮೆಟ್ರೋ ದರ ಏರಿಕೆ ಬಹಿರಂಗಪಡಿಸುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು. “ಸರ್ಕಾರದ ಬಳಿ ಹಣ ಇಲ್ಲ ಎಂಬುದನ್ನು ತೋರಿಸಲು ನಾನು ಖಾಲಿ ಟ್ರಂಕ್ ತೆಗೆದುಕೊಂಡು ಹೋಗುತ್ತಿದ್ದೇನೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮೆಟ್ರೋ ಪ್ರಯಾಣಿಕರ ಮೇಲೇ ಹಾಕಿದೆ. ಹಣಕಾಸು ಕೊರತೆಯಿಂದಾಗಿ ಜನರ ಜೇಬಿಗೆ ಕೈ ಹಾಕುವ ಕೆಲಸ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ ಅವರು, “ಬಿಎಮ್ಆರ್ಸಿಎಲ್ಗೆ ರಾಜ್ಯ ಸರ್ಕಾರ ಶ್ಯಾಡೋ ಕ್ಯಾಶ್ ನೀಡಬೇಕು. ಆದರೆ ಸರ್ಕಾರ ಅದನ್ನು ಮಾಡದೇ, ಪ್ರಯಾಣಿಕರಿಂದಲೇ ಹಣ ಸಂಗ್ರಹಿಸಲು ಸೂಚಿಸಿದೆ” ಎಂದು ದೂರಿದರು. ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಈ ದರ ಏರಿಕೆ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇತ್ತ ಶಾಸಕ ಸಿ.ಕೆ. ರಾಮಮೂರ್ತಿಯವರೂ ಸಹ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಮೆಟ್ರೋ ದರ ಏರಿಕೆ ಸಾಮಾನ್ಯ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಮಧ್ಯಮ ವರ್ಗದವರು ಪ್ರತಿದಿನ ಮೆಟ್ರೋ ಬಳಸುತ್ತಿದ್ದಾರೆ. ಅವರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ಸರ್ಕಾರದ ಜನವಿರೋಧಿ ನೀತಿಯ ಸಂಕೇತ” ಎಂದು ಹೇಳಿದರು.





