ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಒಂದಾದ ಮೇಲೊಂದು ಸ್ಫೋಟಕ ಮಾಹಿತಿ ಬಹಿರಂಗವಾಗ್ತಿದೆ. ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಮಾಡಿದ್ದ ಎಕ್ಸಾಮ್ ಸೀಕ್ರೆಟ್ ಇದೀಗ ಇಡಿ ತನಿಖೆಯಲ್ಲಿ ಬಯಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನಡೆಯಬೇಕಿದ್ದ ಪರೀಕ್ಷೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ನಡೆದಿತ್ತು ಅನ್ನೋ ಸೀಕ್ರೆಟ್ ಜೊತೆಗೆ .? ಕೇವಲ ಹತ್ತು ತಿಂಗಳಲ್ಲಿ ಕನ್ನಾಳೆ ಕೋಟಿ ಕೋಟಿ ರೂಪಾಯಿ ಆಸ್ತಿ ಖರೀದಿ ಮಾಡಿರೋ ಮಾಹಿತಿಯೂ ಬಹಿರಂಗವಾಗಿದೆ.
KPSC ಹಗರಣದ ಕರ್ಮಕಾಂಡ ಬಯಲು!
ಫೈವ್ ಸ್ಟಾರ್ ಹೋಟೆಲ್ನಲ್ಲಿ ಎಕ್ಸಾಂ, ಕೋಟಿ ಕೋಟಿ ಆಸ್ತಿ ಖರೀದಿ!
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸ್ತಿರೋ ಇಡಿ ಹಗರಣದ ಮತ್ತಷ್ಟು ರೋಚಕ ರಹಸ್ಯಗಳನ್ನ ಪತ್ತೆಯಚ್ಚಿದ್ದಾರೆ. ಕೆಪಿಎಸ್ಸಿ ವತಿಯಿಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಸಿದ್ದೇ ಒಂದು ದೊಡ್ಡ ಕರ್ಮಕಾಂಡ ಎಂಬ ಪ್ರಮುಕ ಅಂಶವನ್ನೇ ಭೇದಿಸಿದ್ದಾರೆ.
ಇಡಿ ತನಿಖೆ ವೇಳೆ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿದ ರಹಸ್ಯ ವಿಧಾನ ಬಯಲಾಗಿದೆಯಂತೆ.ಆರಂಭದಲ್ಲಿ ಚೀಟಿಯಲ್ಲಿ ಉತ್ತರಗಳನ್ನ ಬರೆದು ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮೊದಲೇ ನೀಡಲಾಗುತ್ತಿದ್ದಂತೆ. ಆದ್ರೆ ಆ ಉತ್ತರಗಳನ್ನ ಬರೆಯಲೂ ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಪ್ಲ್ಯಾನ್ ಮಾಡಲಾಗಿತ್ತು ಎಂಬ ಸ್ಪೋಟಕ ಮಾಹಿತಿಯೂ ಬಹಿರಂಗವಾಗಿದೆ.
ಅದು ಖುದ್ದು ಆರೋಪಿಗಳಿಗೇ ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್ ನೀಡಿ, ಖಾಸಗಿ ಹೋಟೆಲ್ನಲ್ಲಿ ಪರೀಕ್ಷೆ ಬರೆಸಿದ್ದರು ಎನ್ನಲಾಗಿದೆ. ಬಳಿಕ ಆ ಓಎಂಆರ್ ಶೀಟ್ಗಳನ್ನ ಜ್ಞಾನೇಂದ್ರಕುಮಾರ್ ಮೂಲಕ ಪಟ್ಟಿಗೆ ಸೇರಿಸಿ, ಯಾರಿಗೂ ಅನುಮಾನ ಬಾರದಂತೆ ಮೌಲ್ಯಮಾಪನ ಮಾಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಇನ್ನು ಇಡಿ ಪರಿಶೀಲನೆ ವೇಳೆ ಇಂಗ್ಲಿಷ್ನಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನೂ ಬರೆಯಲು ಸಾಧ್ಯವಾಗದ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಪರೀಕ್ಷೆ ಬರೆಸಿದ್ದ ಹೋಟೆಲ್ ಸುತ್ತಮುತ್ತಲೂ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಕೆಲ ಸದಸ್ಯರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.
ಮತ್ತೊಂದೆಡೆ ಕನ್ನಾಳೆ ಹಣದ ಮೂಲ ಭೇದಿಸಿರೋ ಇಡಿ ಕನ್ನಾಳೆ ಕೇವಲ ಹತ್ತು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿರುವ ರಹಸ್ಯವನ್ನು ಪತ್ತೆ ಮಾಡಿದ್ದಾರೆ. ಸುಮಾರು ಎಂಟು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ನಗದು ನೀಡಿ ಖರೀದಿಸಿದ್ದಾನಂತೆ. ಅದರ ಜೊತೆಗೆ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಓಂಕಾರ್ ಮೂಲಕ ನಗದು ಹಣವನ್ನ ಸೊಸೈಟಿಗೆ ಸಂದಾಯ ಮಾಡಿ, ಬಳಿಕ ಅದನ್ನ ಬಿಳಿ ಹಣವಾಗಿ ಪರಿವರ್ತಿಸಲಾಗುತ್ತಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಣದ ಮೂಲಕ ಸಂಬಂಧಿಕರ ಹೆಸರಿನಲ್ಲಿ, ಅದರಲ್ಲೂ ಮಾವನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿರುವ ಶಂಕೆ ವ್ಯಕ್ತವಾಗಿದೆ.
ಪರೀಕ್ಷಾ ಅಕ್ರಮದಿಂದ ಹಿಡಿದು ಅಕ್ರಮ ಹಣದ ವರ್ಗಾವಣೆ ಮತ್ತು ಆಸ್ತಿ ಖರೀದಿವರೆಗೆ ಹಲವು ಆಯಾಮಗಳಲ್ಲಿ ಇಡಿ ತನಿಖೆ ಮುಂದುವರಿದಿದೆ. ಆರೋಪಗಳ ಹಿಂದಿನ ಸಂಪೂರ್ಣ ಸತ್ಯ ತನಿಖೆಯಿಂದಲೇ ಹೊರಬರಬೇಕಿದೆ.





