ಬೆಂಗಳೂರು: ನಮ್ಮ ಮೆಟ್ರೋ ಇದೀಗ ಆದಾಯವನ್ನು ಹೆಚ್ಚಿಸಿಕೊಳ್ಳುವ ಹೊಸ ಮಾರ್ಗವನ್ನು ಹಿಡಿದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತೊಂದು ಮೆಟ್ರೋ ನಿಲ್ದಾಣಕ್ಕೆ ಖಾಸಗಿ ಕಂಪನಿಯ ಹೆಸರಿಡುವ ಮೂಲಕ ಭಾರೀ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಾರಿ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ ‘ಬಾಗ್ ಮಾನೆ’ ಹೆಸರಿಡಲಾಗುತ್ತಿದ್ದು, ಈ ಒಪ್ಪಂದದ ಮೊತ್ತ 40 ಕೋಟಿ ರೂಪಾಯಿಗಳಾಗಿದೆ.
ಈ ಒಪ್ಪಂದವನ್ನು BMRCL ಮತ್ತು ಬಾಗ್ ಮಾನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ 20 ವರ್ಷಗಳ ಅವಧಿಗೆ ಮಾಡಲಾಗಿದೆ. ಒಪ್ಪಂದದ ಭಾಗವಾಗಿ ಕಂಪನಿಯು ಒಟ್ಟು 40 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿದ್ದು, ಇದರಲ್ಲಿ 20 ಕೋಟಿ ರೂಪಾಯಿಗಳನ್ನು ಈಗಾಗಲೇ ಮುಂಗಡವಾಗಿ ಪಾವತಿಸಿದೆ. ಈ ಮೂಲಕ ಮೆಟ್ರೋ ಸಂಸ್ಥೆಗೆ ಮಹತ್ವದ ಆರ್ಥಿಕ ನೆರವು ಲಭಿಸಿದೆ.
ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣವು ಔಟರ್ ರಿಂಗ್ ರೋಡ್‌ನ ಪ್ರಮುಖ ಭಾಗದಲ್ಲಿದ್ದು, ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಇದೆ. ಈ ಮಾರ್ಗವು ವಿಮಾನ ನಿಲ್ದಾಣ ಸಂಪರ್ಕ ವ್ಯವಸ್ಥೆಯಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದು, ಒಟ್ಟು 19.75 ಕಿಲೋಮೀಟರ್ ಉದ್ದ ಹೊಂದಿದೆ.
ಇದಕ್ಕೂ ಮೊದಲು ನಮ್ಮ ಮೆಟ್ರೋದಲ್ಲಿ ಹಲವು ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಪ್ರಕ್ರಿಯೆ ಆರಂಭವಾಗಿತ್ತು. ಬಯೋಕಾನ್ ಹೆಬ್ಬಗೋಡಿ, ಡೆಲ್ಮಾ ಎಲೆಕ್ಟ್ರಾನಿಕ್ ಸಿಟಿ ಮತ್ತು ಪ್ರೆಸ್ಟೀಜ್ ಗ್ರೂಪ್ ಬೆಳ್ಳಂದೂರು (ಸುಮಾರು 90 ಕೋಟಿ ರೂ. ಒಪ್ಪಂದ) ಮೊದಲಾದ ಉದಾಹರಣೆಗಳು ಇದಕ್ಕೆ ಸಾಕ್ಷಿಯಾಗಿದೆ. ಈಗ ‘ಬಾಗ್ ಮಾನೆ’ ಕೂಡ ಇದೇ ಸಾಲಿಗೆ ಸೇರ್ಪಡೆಯಾಗಿದೆ.
ಈ ಮಹತ್ವದ ಒಪ್ಪಂದಕ್ಕೆ BMRCL ವ್ಯವಸ್ಥಾಪಕ ನಿರ್ದೇಶಕ ಡಾ. ಜಿ. ರವಿಶಂಕರ್ ಹಾಗೂ ಬಾಗ್ ಮಾನೆ ಡೆವಲಪರ್ಸ್ ಪರವಾಗಿ ಆದಿತ್ಯ ಬಾಗ್ ಮಾನೆ ಸಹಿ ಹಾಕಿದ್ದಾರೆ. ಒಪ್ಪಂದದ ನಂತರ ತಕ್ಷಣವೇ ಮುಂಗಡ ಹಣ ಪಾವತಿಸಿರುವುದು. ಮೆಟ್ರೋ ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಮೂಲಕ BMRCL ತನ್ನ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ.
ಇನ್ನು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ ಇರುವ ಈ ಮಾರ್ಗದ ಕಾಮಗಾರಿ ವೇಗವಾಗಿ ಸಾಗುತ್ತಿದೆ. 2026ರ ಡಿಸೆಂಬರ್ ವೇಳೆಗೆ ಈ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ತೆರೆಯುವ ನಿರೀಕ್ಷೆಯಿದೆ.





