ಬೆಂಗಳೂರು: ಬೆಂಗಳೂರಿನಲ್ಲಿ ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 18 ಅಂತಸ್ತಿನ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ನಿರ್ಧಾರ ಕೈಗೊಂಡಿದೆ.
ಒಂದು ಬದಿಗೆ ಅಪಾಯಕಾರಿಯಾಗಿ ವಾಲಿರುವ ಈ ಕಟ್ಟಡ ಹಾನಿ ಪತ್ತೆಯಾಗಿರುವ ಹಿನ್ನೆಲೆ ಭವಿಷ್ಯದಲ್ಲಿ ಸಂಭವಿಸಬಹುದಾದ ದೊಡ್ಡ ದುರಂತವನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ಈ ಕಾರ್ಯಾಚರಣೆ ಬೆಂಗಳೂರಿನ ಇತಿಹಾಸದಲ್ಲೇ ಅತಿ ಎತ್ತರದ ಕಟ್ಟಡ ಡೆಮಾಲಿಷನ್ ಕಾರ್ಯಾಚರಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕೂಡ್ಲು ಪ್ರದೇಶದಲ್ಲಿರುವ ಈ 18 ಅಂತಸ್ತಿನ ಕಟ್ಟಡದಲ್ಲಿ ಒಟ್ಟು 49 ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಂಡಿವೆ. ಆದರೆ ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದಿದ್ದು, ಕಟ್ಟಡವು ಒಂದು ಬದಿಗೆ ವಾಲಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ವರದಿಯ ಪ್ರಕಾರ, ಇದೇ ಸ್ಥಿತಿ ಮುಂದುವರಿದರೆ ಯಾವುದೇ ಸಮಯದಲ್ಲಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಹುಮಹಡಿ ಕಟ್ಟಡವು SNN ರಾಜ್ ಕಾರ್ಪ್ ಸಂಸ್ಥೆಯ ಒಡೆತನದಲ್ಲಿದೆ. ಕಟ್ಟಡದ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸಂಸ್ಥೆಯ ಮಾಲೀಕರೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಕಟ್ಟಡದ ಸುರಕ್ಷತೆ, ಸುತ್ತಮುತ್ತಲಿನ ನಿವಾಸಿಗಳ ಜೀವಕ್ಕೆ ಎದುರಾಗಿರುವ ಅಪಾಯ ಹಾಗೂ ಭವಿಷ್ಯದಲ್ಲಿ ಸಂಭವಿಸಬಹುದಾದ ದುರಂತದ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಜಿಬಿಎ ಸೂಚನೆಗೆ ಸ್ಪಂದಿಸಿದ SNN ರಾಜ್ ಕಾರ್ಪ್ ಸಂಸ್ಥೆ, ಕಟ್ಟಡವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಡೆಮಾಲಿಷನ್ ಕಾರ್ಯಾಚರಣೆಗೆ ಅಗತ್ಯವಾಗುವ ಸಂಪೂರ್ಣ ವೆಚ್ಚವನ್ನೂ ತಾವೇ ಭರಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಜ್ಞರ ಮೇಲ್ವಿಚಾರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಟ್ಟಡವನ್ನು ಸುರಕ್ಷಿತವಾಗಿ ನೆಲಸಮಗೊಳಿಸುವ ಕಾರ್ಯ ಆರಂಭವಾಗಲಿದೆ.
ಮಾಹಿತಿ ಪ್ರಕಾರ, ಕಟ್ಟಡವನ್ನು ಮೇಲಿನ ಮಹಡಿಯಿಂದ ಹಂತ ಹಂತವಾಗಿ ಕೆಳಭಾಗದವರೆಗೆ ತೆರವುಗೊಳಿಸುವ ಸಾಧ್ಯತೆ ಇದೆ. ಈ ವೇಳೆ ಸುತ್ತಮುತ್ತಲಿನ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಡೆಮಾಲಿಷನ್ ಸಮಯದಲ್ಲಿ ಧೂಳು ನಿಯಂತ್ರಣ, ಸುರಕ್ಷತಾ ವಲಯ ನಿರ್ಮಾಣ, ಸಂಚಾರ ನಿಯಂತ್ರಣ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.





