ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಏಳನೇ ತರಗತಿಯ (13 ವರ್ಷದ) ಒರ್ವ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಬ್ಬರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯ ವಿದ್ರಾಯಕ ಘಟನೆ ನಡೆದಿದೆ.
ನವೆಂಬರ್ 23ರಂದು ಬಾಲಕಿ ತನ್ನ ಮನೆಯಿಂದ ಸಮೀಪದಲ್ಲಿರುವ ಹಿಟ್ಟಿನ ಗಿರಣಿಗೆ ಧಾನ್ಯ ಬೀಸಲು ಹೋಗಿದ್ದಳು. ಆ ಸಮಯದಲ್ಲಿ, ಇಬ್ಬರು ಅಪರಿಚಿತರು ಅವಳನ್ನು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ, ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಈ ಸಮಯದಲ್ಲಿ ಆರೋಪಿಗಳು ಬಾಲಕಿಗೆ ಯಾರಿಗಾದರೂ ಈ ವಿಷಯ ತಿಳಿಸಿದರೆ ಅವಳನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಮೂದಾಗಿದೆ. ಭಯದಿಂದ ಮನೆಗೆ ಮರಳಿದ ಬಾಲಕಿ ಆರಂಭದಲ್ಲಿ ಘಟನೆಯ ಬಗ್ಗೆ ಮೌನವಾಗಿದ್ದಳು. ಆದರೆ ದೈಹಿಕ ನೋವು ತಡೆಯಲಾಗದೆ, ಕೊನೆಗೆ ಕುಟುಂಬದವರಿಗೆ ಹಲವಾರು ದಿನಗಳ ನಂತರ ಘಟನೆಯನ್ನು ತಿಳಿಸಿದಳು.
ಬಾಲಕಿಯ ಕುಟುಂಬವು ದಿ. 27 ನವೆಂಬರ್ ರಂದು ಈ ಸಂಬಂಧಿತ ಮಾಹಿತಿಯೊಂದಿಗೆ ಮುರಗೋಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಿತು. ಬಾಲಕಿಯ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತಕ್ಷಣ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376ಡಿ (ಗ್ಯಾಂಗ್ ರೇಪ್), ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸಂಬಂಧಿತ ವಿಧಿಗಳು ಮತ್ತು ಬಾಲಕಿಗೆ ಜೀವ ಬೆದರಿಕೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಸಂಪೂರ್ನ ಮಾಹಿತಿ ತಿಳಿಯಲು ಪೊಳಿಸರು ತನಿಖೆ ಆರಂಭಿಸಿದ್ದಾರೆ ಹಾಗೂ ಆರೋಪಿಗಳನ್ನ ಹುಡುಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರಗೋಡ ಪೊಲೀಸರು ತನಿಖೆಯಲ್ಲಿ ತೀವ್ರ ಗಮನ ಹರಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಘಟನೆಯಾದ ಸ್ಥಳದ ಪರಿಶೋಧನೆ ನಡೆಸಿ, ಫೋರೆನ್ಸಿಕ್ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಮುಗಿಸಲಾಗಿದೆ. ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ, ಆದರೆ ಪೊಲೀಸರು ಅವರಿಗಾಗಿ ಶೋದಾ ಕಾರ್ಯ ನಡೆಸಿದ್ದಾರೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಬಾಲಕಿ ಮತ್ತು ಅವಳ ಕುಟುಂಬಕ್ಕೆ ರಕ್ಷಣೆ ನೀಡುವುದರ ಜೊತೆಗೆ ಅಗತ್ಯವಾದ ಮಾನಸಿಕ ಆರೈಕೆ ಸಹಾಯವನ್ನೂ ನೀಡುವುದಾಗಿ ಪೊಳಿಸರು ಬರವಸೆ ನೀಡಿದ್ದಾರೆ.
ಸ್ಥಳೀಯ ನಾಗರಿಕರು ಮತ್ತು ಸಾಮಾಜಿಕ ಸಂಸ್ಥೆಗಳು ತ್ವರಿತ ನ್ಯಾಯದ ಮೇಲೆ ಒತ್ತಡ ಹೇರುತ್ತಿವೆ. ಪೊಲೀಸರು ತನಿಖೆಯನ್ನು ವೇಗಗೊಳಿಸಬೇಕು ಮತ್ತು ಅಪರಾಧಿಗಳನ್ನು ಕಟ್ಟಕಡೆಯ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ನಾಗರಿಕ ಸಮಾಜಕ್ಕೆ ಕಳಂಕ. ಕಾನೂನು ತನ್ನ ಸಂಪೂರ್ಣ ಕ್ರಮ ಜಾರಿ ಮಾಡಲೇ ಬೇಕು ಎಂದು ಸ್ಥಳೀಯ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರು ಸಾರ್ವಜನಿಕರಿಂದ ಯಾವುದೇ ಸುಳಿವು ದೊರೆತರೆ ತಮಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.





