ಬೆಂಗಳೂರು: ವಿಮಾನಯಾನ ಸಂಸ್ಥೆಯಾದ ಇಂಡಿಗೋ (IndiGo) ವಿಮಾನಗಳ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಗಂಭೀರ ವ್ಯತ್ಯಯವು ಪ್ರಯಾಣಿಕರಿಗೆ ಮಾತ್ರವಲ್ಲದೆ, ಸ್ಥಳೀಯ ಆತಿಥ್ಯ ಉದ್ಯಮಕ್ಕೂ (Hospitality Industry) ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಮಾನಗಳ ದಿಢೀರ್ ರದ್ದತಿ ಮತ್ತು ವಿಳಂಬಗಳಿಂದಾಗಿ, ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ (Five Star Hotel) ದರದಲ್ಲಿ ಶೇ.40 ರಿಂದ ಶೇ.60 ರಷ್ಟು ಭಾರೀ ಏರಿಕೆ ಕಂಡುಬಂದಿದೆ.
ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು ಮತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ನೂರಾರು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ಬಂದಿದೆ. ಪ್ರಮುಖ ವಿಮಾನಗಳ ಹಾರಾಟವು ಮರಳಿ ಮೊದಲಿನ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ಸಮಯ ಹಿಡಿಯುವ ಸಾಧ್ಯತೆ ಇರುವುದರಿಂದ, ಪರ್ಯಾಯ ವಿಮಾನಗಳಿಗಾಗಿ ಕಾಯುತ್ತಿರುವ ಪ್ರವಾಸಿಗರು ಅನಿವಾರ್ಯವಾಗಿ ನಗರದ ಸ್ಥಳೀಯ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬೇಕಾಗಿದೆ. ಇದರಿಂದಾಗಿ, ವಿಶೇಷವಾಗಿ ಸ್ಟಾರ್ ಹೋಟೆಲ್‌ಗಳಿಗೆ ಬೇಡಿಕೆ ದಿಢೀರನೆ ಹೆಚ್ಚಾಗಿದೆ.
ಬೇಡಿಕೆಯ ಈ ಹೆಚ್ಚಳವನ್ನು ಲಾಭವಾಗಿ ಪರಿವರ್ತಿಸಿಕೊಂಡಿರುವ ಬಹುತೇಕ ಎಲ್ಲಾ ಪಂಚತಾರಾ ಹೋಟೆಲ್‌ಗಳು ಕಳೆದು ನಾಲ್ಕೈದು ದಿನಗಳಿಂದ ತಮ್ಮ ದರವನ್ನು ಗಣನೀಯವಾಗಿ ಏರಿಕೆ ಮಾಡಿವೆ.
-
ಹಳೆಯ ದರ: ಒಂದು ದಿನಕ್ಕೆ ಸಾಮಾನ್ಯವಾಗಿ ₹10,000 ರಿಂದ ₹15,000 ರೂ. ತೆಗೆದುಕೊಳ್ಳುತ್ತಿದ್ದ ಹೋಟೆಲ್‌ಗಳು.
-
ಪ್ರಸ್ತುತ ದರ: ಇದೀಗ ಅದೇ ಕೋಣೆಗೆ ₹40,000 ರಿಂದ ₹50,000 ರೂ. ವರೆಗೆ ಏರಿಕೆ ಮಾಡಿವೆ.
ಶೇ.40 ರಿಂದ 60 ರಷ್ಟು ದರ ಏರಿಕೆಯ ಬಿಸಿ ನೇರವಾಗಿ ಪ್ರಯಾಣಿಕರಿಗೆ ತಟ್ಟಿದ್ದು, ವಿಮಾನ ರದ್ದತಿಯಿಂದಾದ ಆರ್ಥಿಕ ಹೊಡೆತದ ಜೊತೆಗೆ ವಸತಿಗಾಗಿ ಬೃಹತ್ ಮೊತ್ತವನ್ನು ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಕೆಲಸಗಳಿಗಾಗಿ ಅಥವಾ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಬಂದಿದ್ದವರಿಗೆ ಇದು ದೊಡ್ಡ ತಲೆನೋವು ತಂದಿದೆ.
ಈ ದರ ಏರಿಕೆ ಕುರಿತು ಬೆಂಗಳೂರು ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷರಾದ ಪಿಸಿ ರಾವ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಈ ರೀತಿಯ ಬೇಡಿಕೆ ಆಧಾರಿತ ದರ ಏರಿಕೆ ಸಾಮಾನ್ಯ ವಿದ್ಯಮಾನ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಬೇಡಿಕೆ ಹೆಚ್ಚಾದಾಗ ದರ ಏರಿಕೆ ಸಾಮಾನ್ಯ ವಿಚಾರವಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ, ಅಥವಾ ಕ್ರಿಕೆಟ್ ಮ್ಯಾಚ್ ದಿನಗಳಲ್ಲಿ, ದೊಡ್ಡ ಸಮಾವೇಶಗಳ ಸಮಯದಲ್ಲಿ ದರಗಳು ಏರಿಕೆ ಆಗೇ ಆಗುತ್ತವೆ ಎಂದು ಪಿಸಿ ರಾವ್ ಹೇಳಿದ್ದಾರೆ. ಈಗ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಆಗಿರುವುದರಿಂದ, ತಮ್ಮ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದ ಪ್ರವಾಸಿಗರು ಹೋಟೆಲ್‌ಗಳನ್ನು ಸೇರುತ್ತಿದ್ದಾರೆ. ಹೀಗಾಗಿ ಹೋಟೆಲ್‌ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ.
ದರ ಏರಿಕೆಯು ಹೋಟೆಲ್ ಮಾಲೀಕರಿಗೆ ತಾತ್ಕಾಲಿಕ ಲಾಭ ತಂದಿದ್ದರೂ, ಪಿಸಿ ರಾವ್ ಅವರು ಪ್ರವಾಸೋದ್ಯಮದ ಮೇಲೆ ಆಗುತ್ತಿರುವ ಹಿನ್ನಡೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ಪ್ರವಾಸೋದ್ಯಮದ ವ್ಯವಹಾರಕ್ಕೆ ಬಹಳ ಹೊಡೆತ ಬಿದ್ದಿದೆ. ವಿಮಾನಗಳ ಸಮಸ್ಯೆಯಿಂದಾಗಿ ಹಲವರು ತಮ್ಮ ಪ್ರವಾಸದ ಯೋಜನೆಗಳನ್ನು ರದ್ದುಪಡಿಸುತ್ತಿದ್ದಾರೆ. ಹೀಗಾಗಿ, ಈ ಇಂಡಿಗೋ ಸಮಸ್ಯೆ ಬಗೆಹರಿಯುವವರೆಗೆ ಹೋಟೆಲ್‌ಗಳ ಬೇಡಿಕೆ ಇದೇ ರೀತಿ ಇರಬಹುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೂಮ್ ರೆಂಟ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಆಗೇ ಆಗುತ್ತದೆ ಎಂದು ಸಮರ್ಥಿಸಿರುವ ಮಾಲೀಕರ ಅಸೋಸಿಯೇಷನ್, ಈ ಪರಿಸ್ಥಿತಿಯು ತಾತ್ಕಾಲಿಕವಾಗಿದ್ದು, ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿದ ನಂತರ ದರಗಳು ಸಹಜ ಸ್ಥಿತಿಗೆ ಮರಳುತ್ತವೆ ಎಂದು ತಿಳಿಸಿದ್ದಾರೆ.





