ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ನಡೆದಿದೆ. ಈ ಘಟನೆ ಅಶೋಕನಗರದ ಗರುಡ ಮಾಲ್ ಬಳಿಯ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸುವ ಮಾರ್ಗದಲ್ಲಿ ನಡೆದಿದ್ದು, ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಘಟನೆ ವಿವರ:
ಮಧ್ಯರಾತ್ರಿ 1 ಗಂಟೆ ಸುಮಾರಿಗೆ, ಲೈವ್ ಬ್ಯಾಂಡ್ ಕಾರ್ಯಕ್ರಮದಿಂದ ಸ್ನೇಹಿತನೊಂದಿಗೆ ಮನೆಗೆ ತೆರಳುತ್ತಿದ್ದ ಹೈದರ್ ಅಲಿ ಎಂಬ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಅವರ ಜೊತೆಯಲ್ಲಿದ್ದ ಸ್ನೇಹಿತ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಹೈದರ್ ಅಲಿಯನ್ನು ತಕ್ಷಣ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಬಲಿಗರ ಆಕ್ರೋಶ
ಈ ಸುದ್ದಿಯು ತಿಳಿಯುತ್ತಿದ್ದಂತೆ, ಹೈದರ್ ಅವರ ಬೆಂಬಲಿಗರು ಬೌರಿಂಗ್ ಆಸ್ಪತ್ರೆಗೆ ಆಗಮಿಸಿದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಬೆಂಬಲಿಗರು ಲಾಂಗು ಮತ್ತು ಮಚ್ಚು ಹಿಡಿದು ಹೈಡ್ರಾಮ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಹತ್ಯೆಯ ಹಿಂದಿನ ಕಾರಣ:
ಹೈದರ್ ಅಲಿ, ವಿಧಾನಸಭಾ ಸದಸ್ಯ ಎನ್.ಎ.ಹ್ಯಾರಿಸ್ ಅವರ ಆಪ್ತರಾಗಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹತ್ಯೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಶೋಕನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.