ಬಳ್ಳಾರಿ, ಜು. 7: ಕುಟುಂಬ ಕಲಹ ಬಗೆಹರಿಸುವ ನೆಪದಲ್ಲಿ ಮಾತುಕತೆಗೆಂದು ಮನೆಗೆ ಕರೆಸಿಕೊಂಡು ಪತ್ನಿ ಹಾಗೂ ಮಾವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಗುಗ್ಗರಟ್ಟಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು 24 ವರ್ಷದ ನಾಗಲಕ್ಷ್ಮೀ ಮತ್ತು ಆಕೆಯ ತಂದೆ 48 ವರ್ಷದ ಶ್ರೀನಿವಾಸ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಪತಿ ತೇಜಾ ಹಾಗೂ ಆತನ ತಂದೆ ಗುರುಶಂಕರ್ ಮೇಲೆ ಕೊಲೆ ಆರೋಪ ಕೇಳಿಬಂದಿದೆ.
ಮಾತುಕತೆಗೆ ಕರೆಸಿದ ಕೀಚಕ
ಕುಟುಂಬದ ಸಮಸ್ಯೆ ಬಗ್ಗೆ ಮಾತುಕತೆ ನಡೆಸಬೇಕೆಂದು ಪತ್ನಿ ಹಾಗೂ ಮಾವನನ್ನು ಆರೋಪಿ ತೇಜಾ ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಹರಿತವಾದ ಆಯುಧಗಳಿಂದ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆರೋಪಿ ದೋಬಿ ಕೆಲಸ ಮಾಡಿಕೊಂಡಿದ್ದು, ಹೆಂಡತಿಯ ಮೇಲೆ ಅನುಮಾನ ಹೊಂದಿದ್ದ ಕಾರಣ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಶವದ ಮುಂದೆ ಕುಳಿತ ಆರೋಪಿಗಳು
ಕೊಲೆ ಮಾಡಿದ ಬಳಿಕ ಪರಾರಿಯಾಗದೆ ಇಬ್ಬರು ಆರೋಪಿಗಳು ಶವಗಳ ಮುಂದೆಯೇ ಕುಳಿತಿದ್ದರು ಎನ್ನಲಾಗಿದೆ. ಸ್ಥಳೀಯರು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ಏನಿದು ವಿವಾದ?
ಹೆಂಡತಿ ನಾಗಲಕ್ಷ್ಮೀ ಮೇಲೆ ದಾಂಪತ್ಯದಲ್ಲಿನ ಅನುಮಾನವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಆರೋಪಿ ತೇಜಾ ತನ್ನ ಪತ್ನಿ ನಡವಳಿಕೆ ಬಗ್ಗೆ ಅನುಮಾನ ಹೊಂದಿದ್ದನು. ಇದೇ ವಿಷಯವಾಗಿ ಆಗಾಗ ಜಗಳಗಳಾಗುತ್ತಿದ್ದವು. ಸಮಸ್ಯೆಯನ್ನು ಬಗೆಹರಿಸುವ ನೆಪದಲ್ಲಿ ಮಾವ ಮತ್ತು ಪತ್ನಿಯನ್ನು ಮನೆಗೆ ಕರೆಸಿದ ಆರೋಪಿ, ಮಾತುಕತೆ ನಡೆಯುವ ವೇಳೆ ಹಲ್ಲೆ ಮಾಡಿದ್ದಾನೆ.
ಆರೋಪಿಗಳು ಹರಿತವಾದ ಆಯುಧಗಳನ್ನು ಬಳಸಿ ಇಬ್ಬರ ಮೇಲೆಯೂ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸರ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರಿ ಜಿಲ್ಲಾ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಅವರು, ಆರೋಪಿಗಳಾದ ತೇಜಾ ಮತ್ತು ಅವನ ತಂದೆ ಗುರುಶಂಕರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.





