ಕೇಂದ್ರ ಸರ್ಕಾರವು ಮಾನವರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಜನ ಔಷಧಗಳನ್ನು ಒದಗಿಸುವ ಜನೌಷಧಿ ಯೋಜನೆಯ ಮಾದರಿಯಲ್ಲೇ, ಈಗ ಪಶು ಔಷಧಿ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿಯಲ್ಲಿ ದೇಶದ ರೈತರು ಮತ್ತು ಪಶುಪಾಲಕರು ತಮ್ಮ ಜಾನುವಾರುಗಳಿಗೆ ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಜನ ಔಷಧಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಪಶು ಔಷಧಿ ಯೋಜನೆಯು ಲಿವ್ಸ್ಟಾಕ್ ಹೆಲ್ತ್ ಅಂಡ್ ಡಿಸೀಸ್ ಕಂಟ್ರೋಲ್ (LH&DC) ಕಾರ್ಯಕ್ರಮದ ಭಾಗವಾಗಿದೆ. ಇದಕ್ಕಾಗಿ 2024-25 ಮತ್ತು 2025-26 ಆರ್ಥಿಕ ವರ್ಷಗಳಿಗೆ ₹3,880 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ ₹75 ಕೋಟಿ ರೂ. ನಿರ್ದಿಷ್ಟವಾಗಿ ಜನೆರಿಕ್ ಪಶು ಔಷಧಿಗಳ ತಯಾರಿಕೆ, ಮಾರಾಟ ಮತ್ತು ಪ್ರಚಾರಕ್ಕಾಗಿ ವಿನಿಯೋಗಿಸಲಾಗುವುದು. ಈ ಔಷಧಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುವುದು.
ರೈತರಿಗೆ ಪ್ರಯೋಜನ:
ಸರ್ಕಾರದ ಗುರಿ, ಪಶುಗಳ ಆರೋಗ್ಯ ಸಂರಕ್ಷಣೆ ಮತ್ತು ರೋಗ ನಿಯಂತ್ರಣದ ವೆಚ್ಚವನ್ನು 60-70% ಕಡಿಮೆ ಮಾಡುವುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಪಶು ಔಷಧಿಗಳ ಬೆಲೆ ಅತಿಯಾಗಿರುವುದರಿಂದ ಸಣ್ಣ ರೈತರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಶು ಔಷಧಿ ಯೋಜನೆಯು ಈ ಸವಾಲನ್ನು ಪರಿಹರಿಸಲು ಉದ್ದೇಶಿಸಿದೆ. ಇದರೊಂದಿಗೆ, ಸಾಂಪ್ರದಾಯಿಕ ಪಶುವೈದ್ಯಕೀಯ ಔಷಧಿಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನೂ ಸರ್ಕಾರ ಹಮ್ಮಿಕೊಳ್ಳಲಿದೆ.
ಈ ಬಗ್ಗೆ ಸಭೆಯ ಬಳಿಕ ಮಾಹಿತಿ ನೀಡಿ ರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ಜನ ಔಷಧಿಯಂತೆ ಪಶು ಔಷಧಿ ಎಂಬ ಯೋಜನೆಯನ್ನು ಆರಂಭಿಸಲಾಗಿದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸಲಾಗುವುದು.ಅದೇ ರೀತಿ, ಪಶು ಔಷಧಿ ಯೋಜನೆ ಪಶುಪಾಲನೆ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ. ಪ್ರಾಣಿಗಳ ರೋಗಗಳ ನಿರ್ಮೂಲನೆ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ಇದು ಸಹಕಾರಿಯಾಗುವುದು.”
ಯೋಜನೆಯನ್ನು ರಾಜ್ಯಗಳ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ತರಲಾಗುವುದು. ಸರ್ಕಾರಿ ಮತ್ತು ಖಾಸಗಿ ಪಶುವೈದ್ಯರು ಈ ಔಷಧಿಗಳ ಬಳಕೆಗೆ ರೈತರಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಇದರ ಜೊತೆಗೆ, ಔಷಧಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಔಷಧ ನಿಯಂತ್ರಣ ಸಂಸ್ಥೆಗಳು ನಿಯಮಿತ ಮೇಲ್ವಿಚಾರಣೆ ನಡೆಸಲಿವೆ.
ಪ್ರಾಣಿ ಆರೋಗ್ಯವು ಕೃಷಿ ಆರ್ಥಿಕತೆಯ ಮೂಲಸ್ತಂಭ. ಪಶು ಔಷಧಿ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ದೇಶದ ಪಶುಸಂಪತ್ತಿನ ಸುರಕ್ಷತೆಗೂ ದಾರಿ ಮಾಡಿಕೊಡುವ ನಿರ್ಣಯವಾಗಿದೆ. ಇದು ‘ವನ್ ಹೆಲ್ತ್’ ಪರಿಕಲ್ಪನೆಗೆ ಸರ್ಕಾರದ ಮುಂದಿನ ಹೆಜ್ಜೆ ಎಂದು ಪರಿಗಣಿಸಲಾಗಿದೆ.