ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ದೇಶ ದಾಳಿ ನಡೆಸಿದರೆ, ಮತ್ತೊಂದು ದೇಶ ಪ್ರತಿದಾಳಿ ನಡೆಸುವ ಮೂಲಕ ಜಾಗತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಈ ಎರಡೂ ದೇಶಗಳ ನಡುವಿನ ನಿರಂತರ ಸಂಘರ್ಷ ಈಗ ಇಡೀ ವಿಶ್ವಕ್ಕೇ ಕಂಟಕವಾಗಿ ಪರಿಣಮಿಸಿದೆ.
ಮತ್ತೆ ಶುರುವಾಯ್ತು ಯುದ್ಧದ ಭೀತಿ
ಕಳೆದ ಫೆಬ್ರವರಿ ಅಂತ್ಯದಲ್ಲಿ ಆರಂಭವಾಗಿದ್ದ ಈ ಭೀಕರ ಯುದ್ಧ ಸುಮಾರು 40 ದಿನಗಳ ಕಾಲ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ಈ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಸರಬರಾಜಿಗೆ ತೊಂದರೆಯಾಗಿ, ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಗಗನಕ್ಕೇರಿದ್ದವು. ಕೇವಲ ಬೆಲೆ ಏರಿಕೆಯಷ್ಟೇ ಅಲ್ಲದೆ, ಹಲವು ದೇಶಗಳಲ್ಲಿ ಇಂಧನದ ತೀವ್ರ ಅಭಾವವೂ ಸೃಷ್ಟಿಯಾಗಿತ್ತು. 40 ದಿನಗಳ ಸುದೀರ್ಘ ಕದನದ ಬಳಿಕ ಜಗತ್ತು ನಿಟ್ಟುಸಿರು ಬಿಡುವಷ್ಟರಲ್ಲಿ, ಉಭಯ ದೇಶಗಳ ನಡುವಿನ ಕದನ ವಿರಾಮ ಒಪ್ಪಂದಗಳು ಮುರಿದು ಬಿದ್ದಿವೆ. ಈಗ ಮತ್ತೆ ಪರಸ್ಪರ ಬಾಂಬ್ ಹಾಗೂ ಮಿಸೈಲ್ ದಾಳಿಗಳು ತೀವ್ರಗೊಂಡಿವೆ.
” ನನ್ನ ಮುಟ್ಟಿದರೆ ಸಾವಿರ ಮಿಸೈಲ್ ನುಗ್ಗುತ್ತವೆ”: ಬೆದರಿಕೆ ಹಾಕಿದರೇ ಅಮೆರಿಕಾದ ಅಧ್ಯಕ್ಷ
ಇತ್ತೀಚೆಗಷ್ಟೇ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯೂ ನೆರವೇರಿದೆ. ಇದರ ಬೆನ್ನಲ್ಲೇ ಅವರ ಪುತ್ರ ಮೊಜ್ತಾಬಾ ಖಮೇನಿ, “ಅಮೆರಿಕಾದ ಮೇಲೆ ಪ್ರತಿಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮೊಜ್ತಾಬಾ ಖಮೇನಿ ನಿಜಕ್ಕೂ ಬದುಕಿದ್ದಾರೆಯೇ ಎಂಬ ಸಂಶಯ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ. ಏಕೆಂದರೆ, ಅಯತೊಲ್ಲಾ ಖಮೇನಿ ನಿಧನರಾದಾಗಿನಿಂದ ಮೊಜ್ತಾಬಾ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಒಂದು ವೇಳೆ ಇರಾನ್ ನಮ್ಮ ಮೇಲೆ ದಾಳಿ ಮಾಡಿದ್ರೆ ಸಾವಿರ ಮಿಸೈಲ್‌ಗಳು ನಿಮ್ಮತ್ತ ನುಗ್ಗಿ ಬರಲಿದೆ ಎಂದು ಇರಾನ್‌ಗೆ ಅಮೆರಿಕಾ ಬೆದರಿಕೆಯನ್ನ ಕೂಡ ಹಾಕಿದೆ..
ಭಾರತೀಯರಿದ್ದ ಹಡಗಿನ ಮೇಲೆ ದಾಳಿ
ಭಾರತದ ಕೆಂಗಣ್ಣು! ಈ ಉದ್ವಿಗ್ನತೆಯ ನಡುವೆ, ಹಾರ್ಮುಜ್ ಜಲಸಂಧಿಯ ಬಳಿ ಸರಕು ಸಾಗಣೆ ಮಾಡುತ್ತಿದ್ದ ಹಡಗಿನ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವುದು ತೀವ್ರ ಆತಂಕ ಮೂಡಿಸಿದೆ. ಈ ಹಡಗಿನಲ್ಲಿ 14 ಜನ ಭಾರತೀಯ ಸಿಬ್ಬಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದಾಳಿಯ ಬಳಿಕ 13 ಭಾರತೀಯರನ್ನು ರಕ್ಷಿಸಲಾಗಿದೆಯಾದರೂ, ಮತ್ತೊಬ್ಬ ಭಾರತೀಯ ನಾಪತ್ತೆಯಾಗಿದ್ದಾರೆ. ಇರಾನ್ನ ಈ ಉಡಾಫೆಯ ನಡೆ ಈಗ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಾರೆಯಾಗಿ, ಅಮೆರಿಕಾ ಮತ್ತು ಇರಾನ್ ನಡುವಿನ ಈ ಹಠಮಾರಿ ಧೋರಣೆ ಮತ್ತು ನಿರಂತರ ದಾಳಿಗಳು ಇಡೀ ವಿಶ್ವವನ್ನು ಸಂಕಷ್ಟಕ್ಕೆ ತಳ್ಳುತ್ತಿವೆ. ಒಂದು ವೇಳೆ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ ಸಂಪೂರ್ಣ ಬಂದ್ ಆದಲ್ಲಿ, ಭಾರತ ಸೇರಿದಂತೆ ಏಷ್ಯಾ ಖಂಡದ ಹಲವು ದೇಶಗಳ ಆರ್ಥಿಕತೆಯ ಮೇಲೆ ಇದು ಭೀಕರ ಪರಿಣಾಮ ಬೀರಲಿದೆ ಎಂಬ ಚಿಂತೆ ಜಾಗತಿಕ ವಲಯವನ್ನು ಕಾಡುತ್ತಿದೆ.





