ವರಮಹಾಲಕ್ಷ್ಮಿ ಹಬ್ಬವು ಲಕ್ಷ್ಮೀ ದೇವಿಯನ್ನು ಆರಾಧಿಸುವ ಶುಭ ಸಂದರ್ಭವಾಗಿದೆ. ಈ ದಿನ ಪ್ರಸಾದವಾಗಿ ರುಚಿಕರವಾದ ಖಾದ್ಯಗಳನ್ನು ಅರ್ಪಿಸುವುದು ಸಾಂಪ್ರದಾಯಿಕವಾಗಿದೆ, ಅದರಲ್ಲಿ ಪುಳಿಯೋಗರೆ ಪ್ರಮುಖವಾದದ್ದು. ಈ ಸುಲಭವಾಗಿ ತಯಾರಿಸಬಹುದಾದ ಖಾದ್ಯವು ಭಾರತದಲ್ಲಿ ಮಾತ್ರವಲ್ಲ, ಅಮೆರಿಕಾದಂತಹ ದೇಶಗಳಲ್ಲೂ ಜನಪ್ರಿಯವಾಗಿದೆ.
ರುಚಿಕರವಾದ ಈ ಖಾದ್ಯವು ನಾಲಿಗೆಗೆ ಹಿಡಿದಂತೆ, ತಿಂದಷ್ಟೂ ಇನ್ನಷ್ಟು ತಿನ್ನಬೇಕೆಂಬ ಆಸೆಯನ್ನು ಉಂಟುಮಾಡುತ್ತದೆ. ಇದನ್ನು ಮನೆಯಲ್ಲಿ ತಯಾರಿಸಲು ಹೆಚ್ಚು ಸಮಯ ಬೇಕಿಲ್ಲ, ಮತ್ತು ಆಧುನಿಕ ಗೃಹಿಣಿಯರಿಗಾಗಿ ಇನ್‌ಸ್ಟಂಟ್ ಪುಳಿಯೋಗರೆ ಪುಡಿಗಳೂ ಲಭ್ಯವಿವೆ. ಈ ಕೆಳಗಿನ ರೆಸಿಪಿಯ ಮೂಲಕ ಇಂದು ವರಮಹಾಲಕ್ಷ್ಮಿ ಹಬ್ಬಕ್ಕೆ ರುಚಿಕರ ಪುಳಿಯೋಗರೆಯನ್ನು ತಯಾರಿಸಿ.
ಬೇಕಾಗುವ ಪದಾರ್ಥಗಳು
-
ಅಕ್ಕಿ: 2 ಕಪ್
-
ನೆನೆಸಿದ ಹುಳಿ: 1 ಕಪ್
-
ಉದ್ದಿನ ಬೇಳೆ: 1 ಚಮಚ
-
ಬೆಲ್ಲ: 1 ಚಮಚ
-
ಕಡಲೆಕಾಯಿ: 1 ಮುಷ್ಟಿ
-
ಅರಶಿನ ಪುಡಿ: 1 ಚಮಚ
-
ಸಾಸಿವೆ: 1 ಚಮಚ
-
ಇಂಗು: ಸಣ್ಣ ತುಂಡು
-
ಜೀರಿಗೆ: 1 ಚಮಚ
-
ಎಳ್ಳಿನ ಪುಡಿ: 1 ಚಮಚ
-
ಕರಿಬೇವಿನ ಎಲೆ: 6-7
-
ಒಣ ಕೆಂಪು ಮೆಣಸು: 3-4
-
ಹಸಿಮೆಣಸು: 3-4 (ಉದ್ದಕ್ಕೆ ಸೀಳಿದ್ದು)
-
ಉಪ್ಪು: ರುಚಿಗೆ ತಕ್ಕಷ್ಟು
-
ತುಪ್ಪ/ಬೆಣ್ಣೆ: 1 ಚಮಚ
ತಯಾರಿಸುವ ವಿಧಾನ
ಅನ್ನ ಬೇಯಿಸಿ: ಅಕ್ಕಿಯನ್ನು ಎಂದಿನಂತೆ ಉದುರುದುರಾಗಿ ಬೇಯಿಸಿಕೊಳ್ಳಿ. ಅನ್ನ ಅಂಟದಂತೆ ಜಾಗರೂಕತೆ ವಹಿಸಿ, ಬೇಕಾದಷ್ಟು ನೀರನ್ನು ಮಾತ್ರ ಬಳಸಿ.
ಅನ್ನಕ್ಕೆ ತಯಾರಿ: ಬೇಯಿಸಿದ ಅನ್ನವನ್ನು ಸ್ವಲ್ಪ ತಣಿಯಲು ಬಿಡಿ. ಇದಕ್ಕೆ ಅರಶಿನ ಪುಡಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ, ಸ್ವಲ್ಪ ಹೊತ್ತು ಹಾಗೆಯೇ ಇಡಿ.
ಒಗ್ಗರಣೆ: ಒಂದು ಪಾತ್ರೆಯಲ್ಲಿ ತುಪ್ಪ/ಬೆಣ್ಣೆಯನ್ನು ಬಿಸಿಮಾಡಿ. ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು, ಒಣ ಕೆಂಪು ಮೆಣಸು, ಮತ್ತು ಕಡಲೆಕಾಯಿಯನ್ನು ಸೇರಿಸಿ ಒಗ್ಗರಣೆ ತಯಾರಿಸಿ. ಕೊನೆಯಲ್ಲಿ ಹಸಿಮೆಣಸನ್ನು ಸೇರಿಸಿ, ಸ್ವಲ್ಪ ಹೊತ್ತು ಹುರಿಯಿರಿ.
ನಂತರ ಬೆಲ್ಲ ಮತ್ತು ಹುಳಿಯನ್ನು ಪಾತ್ರೆಗೆ ಹಾಕಿ. ಹುಳಿಯು ಚೆನ್ನಾಗಿ ಬೇಯುವವರೆಗೆ ಮಂದ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ತದನಂತರ ಈ ಮಸಾಲೆ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಹಾಗೂ ಹುರಿದ ಕಡಲೆಕಾಳಿನೊಂದಿಗೆ ಇದನ್ನು ಅಲಂಕರಿಸಿ. ನಿಮ್ಮ ವರಮಹಾಲಕ್ಷ್ಮೀ ಪೂಜೆಯ ವಿಶೇಷ ಪ್ರಸಾದ ತಿನಿಸು ಸಿದ್ಧವಾಗಿದೆ.