ಇಂದಿನ ಕಾಲದಲ್ಲಿ ಲಿಪ್‌ಸ್ಟಿಕ್ ಮಹಿಳೆಯರ ದೈನಂದಿನ ಮೇಕಪ್‌ನ ಅವಿಭಾಜ್ಯ ಭಾಗವಾಗಿದೆ. ಸಿಂಪಲ್ ಲುಕ್ ಆಗಿರಲಿ ಅಥವಾ ಫುಲ್ ಮೇಕಪ್ ಆಗಿರಲಿ, ತುಟಿಗಳ ಮೇಲೆ ಸರಿಯಾದ ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಮುಖದ ಅಂದವೇ ಬದಲಾಗುತ್ತದೆ. ಆದರೂ ಬಹುತೇಕ ಮಹಿಳೆಯರ ಸಾಮಾನ್ಯ ದೂರು ಏನಂದ್ರೆ ಬೆಳಗ್ಗೆ ಹಚ್ಚಿದ ಲಿಪ್‌ಸ್ಟಿಕ್ ಮಧ್ಯಾಹ್ನವೇ ಮಾಸಿಹೋಗುತ್ತದೆ!
ಆಫೀಸ್‌ಗೆ ಹೋಗುವವರು, ಕಾಲೇಜು ವಿದ್ಯಾರ್ಥಿನಿಯರು, ಕೆಲಸದ ಒತ್ತಡದ ನಡುವೆ ಪದೇ ಪದೇ ಲಿಪ್‌ಸ್ಟಿಕ್ ಟಚ್‌ಅಪ್ ಮಾಡಲು ಸಮಯ ಸಿಗದೇ ಹೋಗುವುದು ಸಹಜ. ಆದರೆ ನೀವು ಗಮನಿಸಿದ್ದೀರಾ? ಕೆಲವರ ಲಿಪ್‌ಸ್ಟಿಕ್ ಬೆಳಗ್ಗೆ ಹೇಗಿರುತ್ತದೋ, ಸಂಜೆವರೆಗೂ ಹಾಗೆಯೇ ಫ್ರೆಶ್ ಆಗಿ ಕಾಣಿಸುತ್ತದೆ. ಇದಕ್ಕೆ ಕಾರಣ ದುಬಾರಿ ಬ್ರಾಂಡ್ ಅಲ್ಲ… ಸರಿಯಾದ ಆಯ್ಕೆ ಮತ್ತು ಹಚ್ಚುವ ವಿಧಾನ!
ಹಾಗಾದರೆ ಲಿಪ್‌ಸ್ಟಿಕ್ ದೀರ್ಘಕಾಲ ಉಳಿಯಲು ಏನು ಮಾಡಬೇಕು? ಇಲ್ಲಿವೆ ನಿಮಗಾಗಿ ಸರಳ ಆದರೆ ಪರಿಣಾಮಕಾರಿ ಟಿಪ್ಸ್‌ಗಳು.
ಲಿಪ್‌ಸ್ಟಿಕ್ ಫಾರ್ಮುಲಾ ಆಯ್ಕೆ ಬಹಳ ಮುಖ್ಯ
ಲಿಪ್‌ಸ್ಟಿಕ್ ಎಷ್ಟು ಹೊತ್ತು ಉಳಿಯುತ್ತದೆ ಅನ್ನೋದು ಅದರ ಫಾರ್ಮುಲಾದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಲಿಕ್ವಿಡ್ ಲಿಪ್‌ಸ್ಟಿಕ್‌ಗಳು ಹೆಚ್ಚು ದೀರ್ಘಕಾಲ ಉಳಿಯುತ್ತವೆ. ಅವು ತುಟಿಗಳ ಮೇಲೆ ಹಚ್ಚಿದ ನಂತರ ಒಣಗಿ ಮ್ಯಾಟ್ ಫಿನಿಶ್ ಕೊಡುತ್ತವೆ.
ಬುಲೆಟ್ ಅಥವಾ ಸ್ಟಿಕ್ ಲಿಪ್‌ಸ್ಟಿಕ್‌ಗಳು ಕೂಡ ಮ್ಯಾಟ್ ಲುಕ್ ಕೊಡುತ್ತವೆ. ಆದರೆ ಅವುಗಳ ಬಾಳಿಕೆ ಲಿಕ್ವಿಡ್ ಲಿಪ್‌ಸ್ಟಿಕ್‌ಗಳಷ್ಟು ಜಾಸ್ತಿ ಇರೋದಿಲ್ಲ. ನೀವು ದಿನವಿಡೀ ಓಡಾಟದಲ್ಲಿದ್ದರೆ ಲಾಂಗ್‌ವೇರ್ ಲಿಕ್ವಿಡ್ ಲಿಪ್‌ಸ್ಟಿಕ್ ಉತ್ತಮ ಆಯ್ಕೆ.
ಟ್ರಾನ್ಸ್‌ಫರ್ ಪ್ರೂಫ್ ಅನ್ನೋದನ್ನ ಮಿಸ್ ಮಾಡ್ಬೇಡಿ
ನಿಜವಾದ ದೀರ್ಘಕಾಲ ಬಾಳಿಕೆ ಬರುವ ಲಿಪ್‌ಸ್ಟಿಕ್ ಒಂದು ಪ್ರಮುಖ ಲಕ್ಷಣ ಹೊಂದಿರುತ್ತದೆ. ಟ್ರಾನ್ಸ್‌ಫರ್ ಆಗೋದಿಲ್ಲ. ಕಾಫಿ ಅಥವಾ ಟೀ ಕುಡಿದಾಗ ಕಪ್‌ಗೆ ಅಂಟಿಕೊಳ್ಳಬಾರದು, ಮಾಸ್ಕ್ ಹಾಕಿದಾಗ ಬಟ್ಟೆಗೆ ಹಚ್ಚಿಕೊಳ್ಳಬಾರದು. ಈ ಗುಣ ಇರುವ ಲಿಪ್‌ಸ್ಟಿಕ್‌ಗಳು ತುಟಿಗಳ ಮೇಲೆ ಗಟ್ಟಿಯಾಗಿ ಅಂಟಿಕೊಂಡಿರುತ್ತವೆ ಮತ್ತು ಗಂಟೆಗಟ್ಟಲೆ ಹಾಗೆಯೇ ಇರುತ್ತವೆ.
ಒಳಗಿನ ಪದಾರ್ಥಗಳಿಗೂ ಗಮನ ಕೊಡಿ
ಲಿಪ್‌ಸ್ಟಿಕ್ ಆಯ್ಕೆ ಮಾಡುವಾಗ ಅದರಲ್ಲಿರುವ ಪದಾರ್ಥಗಳನ್ನು ಗಮನಿಸುವುದು ಬಹಳ ಮುಖ್ಯ. ಹೆಚ್ಚು ಪಿಗ್ಮೆಂಟ್ ಇರುವ ಲಿಪ್‌ಸ್ಟಿಕ್‌ಗಳು ತುಟಿಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತವೆ ಮತ್ತು ಬಣ್ಣವೂ ಗಾಢವಾಗಿ ಕಾಣಿಸುತ್ತದೆ.
ಹಳೆಯ ಕಾಲದ ಲಾಂಗ್‌ಲಾಸ್ಟಿಂಗ್ ಲಿಪ್‌ಸ್ಟಿಕ್‌ಗಳು ತುಟಿಗಳನ್ನು ಒಣಗಿಸುತ್ತಿದ್ದವು. ಆದರೆ ಇತ್ತೀಚಿನ ಆಧುನಿಕ ಲಿಪ್‌ಸ್ಟಿಕ್‌ಗಳಲ್ಲಿ ಹೈಲುರಾನಿಕ್ ಆಮ್ಲ, ವಿಟಮಿನ್ ಇ, ಪೌಷ್ಟಿಕ ತೈಲಗಳು ಸೇರಿರುವುದರಿಂದ ಅವು ತುಟಿಗಳಿಗೆ ಆರಾಮವನ್ನೂ ನೀಡುತ್ತವೆ.
ಹಚ್ಚುವ ವಿಧಾನ ಸರಿಯಾದ್ರೆ ಅರ್ಧ ಕೆಲಸ ಮುಗಿದಂತೆ
ಲಿಪ್‌ಸ್ಟಿಕ್ ಎಷ್ಟು ಒಳ್ಳೆಯದಿದ್ದರೂ, ಸರಿಯಾಗಿ ಹಚ್ಚದಿದ್ರೆ ಹೆಚ್ಚು ಕಾಲ ಉಳಿಯಲ್ಲ. ಮೊದಲು ತುಟಿಗಳನ್ನು ಎಕ್ಸ್‌ಫೋಲಿಯೇಟ್ ಮಾಡಿ ಡೆಡ್ ಸ್ಕಿನ್ ತೆಗೆದುಹಾಕಿ. ನಂತರ ಲಿಪ್ ಬಾಲ್ಮ್ ಹಚ್ಚಿ ತುಟಿಗಳನ್ನು ಮೃದುವಾಗಿಸಿ. ಲಿಪ್ ಲೈನರ್ ಬಳಸಿ ತುಟಿಗಳಿಗೆ ಔಟ್‌ಲೈನ್ ಕೊಟ್ಟರೆ ಲಿಪ್‌ಸ್ಟಿಕ್ ಹರಡುವುದಿಲ್ಲ. ಲಿಪ್‌ಸ್ಟಿಕ್ ಅನ್ನು ತೆಳುವಾದ ಪದರಗಳಲ್ಲಿ ಹಚ್ಚಿ, ಮಧ್ಯೆ ಟಿಷ್ಯೂ ಬಳಸಿ ಬ್ಲಾಟ್ ಮಾಡಿದರೆ ಅದು ಹೆಚ್ಚು ಕಾಲ ಉಳಿಯುತ್ತದೆ.
ಮೈಂಟೈನನ್ಸ್ ಕೂಡ ಮುಖ್ಯ
ಲಿಪ್‌ಸ್ಟಿಕ್ ಹಚ್ಚಿದ ನಂತರ ತುಟಿಗಳನ್ನು ಮಸಿಯುವ ಆಹಾರ, ಹೆಚ್ಚು ತೈಲಯುಕ್ತ ತಿಂಡಿಗಳನ್ನು ತಪ್ಪಿಸಿದರೆ ಅದರ ಬಾಳಿಕೆ ಇನ್ನಷ್ಟು ಹೆಚ್ಚುತ್ತದೆ. ನೀರು ಕುಡಿಯುವಾಗ ಸ್ಟ್ರಾ ಬಳಸುವುದೂ ಸಹ ಸಹಾಯಕ.
ಲಿಪ್‌ಸ್ಟಿಕ್ ದಿನವಿಡೀ ಉಳಿಯಲು ದುಬಾರಿ ಬ್ರಾಂಡ್ ಅವಶ್ಯಕವಿಲ್ಲ. ಸರಿಯಾದ ಫಾರ್ಮುಲಾ, ಗುಣಮಟ್ಟದ ಪದಾರ್ಥಗಳು ಮತ್ತು ಹಚ್ಚುವ ಸರಿಯಾದ ವಿಧಾನ ಇದ್ದರೆ ನಿಮ್ಮ ಲಿಪ್‌ಸ್ಟಿಕ್ ಬೆಳಗ್ಗಿನಿಂದ ಸಂಜೆವರೆಗೆ ಫ್ರೆಶ್ ಆಗೇ ಇರುತ್ತದೆ.





