ಬೆಳಕಿನ ಹಬ್ಬ ಎಂದೇ ಪ್ರಸಿದ್ಧವಾದ ಈ ಹಬ್ಬದಲ್ಲಿ ದೀಪಗಳು, ಪಟಾಕಿಗಳು ಮತ್ತು ಸಿಹಿತಿನಿಸುಗಳು ಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಪಟಾಕಿಗಳನ್ನು ಸುಡುವಾಗ ಉಂಟಾಗುವ ಅಪಾಯಗಳು ಹಬ್ಬದ ಸಂಭ್ರಮವನ್ನು ಕಸಿದುಕೊಳ್ಳಬಹುದು. ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಸಾವಿರಾರು ಜನರು ಪಟಾಕಿ ಅಥವಾ ದೀಪಗಳಿಂದ ಸುಟ್ಟ ಗಾಯಗಳಿಗೆ ತುತ್ತಾಗುತ್ತಾರೆ. ವಿಶೇಷವಾಗಿ ಮಕ್ಕಳು ಮತ್ತು ಯುವಕರಲ್ಲಿ ಇದು ಹೆಚ್ಚು ಕಂಡುಬರುತ್ತದೆ.
ಹಬ್ಬದ ದಿನಗಳಲ್ಲಿ ವೈದ್ಯರು ರಜೆಯಲ್ಲಿರುವುದರಿಂದ, ಸಣ್ಣ ಗಾಯಗಳಿಗೆ ಮನೆಯಲ್ಲೇ ಪ್ರಥಮ ಚಿಕಿತ್ಸೆ ಮಾಡುವುದು ಅತ್ಯಗತ್ಯ. ಆದರೆ, ತಪ್ಪು ಮದ್ದುಗಳು ಸೋಂಕು ಅಥವಾ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು. ತಜ್ಞ ವೈದ್ಯರ ಸಲಹೆಯನ್ನು ಆಧರಿಸಿ, ಸುಟ್ಟ ಗಾಯಗಳಿಗೆ ಸರಿಯಾದ ಪರಿಹಾರಗಳನ್ನು ನೋಡೋಣ.
ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆ
-
ತಣ್ಣೀರಿನ ಧಾರೆ: ಪಟಾಕಿ ಸಿಡಿದು ಸುಟ್ಟುಕೊಂಡ ತಕ್ಷಣ, ಸುಟ್ಟ ಭಾಗವನ್ನು ಸಾಧ್ಯವಾದರೆ ಚೆನ್ನಾಗಿ ಹರಿಯುವ ತಣ್ಣೀರಿನ ಕೆಳಗೆ 15-20 ನಿಮಿಷಗಳ ಕಾಲ ಇರಿಸಿ. ಇದು ಉರಿಯುವಿಕೆಯನ್ನು ಕಡಿಮೆ ಮಾಡಿ, ನೋವನ್ನು ತಗ್ಗಿಸುತ್ತದೆ ಮತ್ತು ಗಾಯವನ್ನು ಆಳವಾಗುವುದರಿಂದ ತಡೆಯುತ್ತದೆ.
-
ಸ್ವಚ್ಛತೆಗೆ ಪ್ರಾಮುಖ್ಯ: ಗಾಯವನ್ನು ಸಾಬೂನು ಇಲ್ಲದೇ ನೀರಿನಲ್ಲಿ ಮೃದುವಾಗಿ ತೊಳೆಯಿರಿ. ಗಾಯದ ಮೇಲೆ ಉರಿಯುವಂಥ ರಾಸಾಯನಿಕ ಕಣಗಳು ಉಳಿದಿದ್ದರೆ ಅವು ತೊಳೆದು ಹೋಗುತ್ತವೆ.
-
ನಂಜುನಿರೋಧಕ ಕ್ರೀಮ್: ಗಾಯವನ್ನು ಚೆನ್ನಾಗಿ ಒಣಗಿಸಿದ ನಂತರ, ‘ಬರ್ನೋಲ’ ಅಥವಾ ಇತರ ನಂಜುನಿರೋಧಕ ಸುಟ್ಟಗಾಯದ ಕ್ರೀಮ್ (Burn Cream) ಹಚ್ಚಿರಿ. ಇದು ಸೋಂಕು ಬರದಂತೆ ರಕ್ಷಿಸುತ್ತದೆ.
ಪರಿಣಾಮಕಾರಿ ಮನೆಮದ್ದುಗಳು
-
ಅಲೋವೆರಾ ಜೆಲ್: ತಾಜಾ ಅಲೋವೆರಾ ದಿಂದ ಪಡೆದ ಜೆಲ್ ಅನ್ನು ಸುಟ್ಟ ಜಾಗದ ಮೇಲೆ ಹಚ್ಚಿರಿ. ಇದರ ಶೀತಲೀಕರಣ ಮತ್ತು ಉರಿಯೂತ ನಿರೋಧಕ ಗುಣಗಳು ಗಾಯವನ್ನು ಶಮನಗೊಳಿಸಿ ಗುಣವಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
-
ಶುದ್ಧ ಜೇನುತುಪ್ಪ: ಸಣ್ಣ ಸುಟ್ಟ ಗಾಯಗಳ ಮೇಲೆ ಸ್ವಲ್ಪ ಶುದ್ಧ ಜೇನುತುಪ್ಪ ಹಚ್ಚಬಹುದು. ಇದು ನಂಜುನಿರೋಧಕ ಗುಣಗಳನ್ನು ಹೊಂದಿದೆ ಮತ್ತು ಗಾಯವನ್ನು ಒದ್ದೆಯಾಗಿ ಇರಿಸಿ ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.
ಯಾವುದನ್ನು ಮಾಡಬಾರದು?
-
ಟೂತ್ ಪೇಸ್ಟ್ ಅಥವಾ ಅರಿಶಿನ ಹಚ್ಚಬೇಡಿ! ಇವು ಗಾಯದ ಉಷ್ಣತೆಯನ್ನು ಹೆಚ್ಚಿಸಬಹುದು ಮತ್ತು ಕೊಳಕು ಸೇರಿ ಸೋಂಕು ಬರಲು ಕಾರಣವಾಗಬಹುದು. ಇವುಗಳ ಬಳಕೆಯಿಂದ ಸುಟ್ಟ ಗುರುತು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇದೆ.
-
ತೆಂಗಿನ ಎಣ್ಣೆ ಅಥವಾ ಬೆಣ್ಣೆ ಹಚ್ಚಬೇಡಿ! ಇವು ಗಾಯದ ಉಷ್ಣತೆಯನ್ನು ಒಳಗೇ ಸೆರೆಹಿಡಿದು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
-
ಗಾಯದ ಮೇಲೆ ಗುಳ್ಳೆಗಳು ಉಬ್ಬಿದರೆ, ಅವನ್ನು ಚುಚ್ಚಬೇಡಿ! ಇದು ಸೋಂಕನ್ನು ಆಮಂತ್ರಿಸುವಂತದ್ದು.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಗಾಯ ಆಳವಾಗಿದ್ದರೆ, ದೊಡ್ಡ ಪ್ರಮಾಣದಲ್ಲಿ ಸುಟ್ಟುಕೊಂಡರೆ, ಮುಖ, ಕೈಕಾಲುಗಳು ಅಥವಾ ಜನನೇಂದ್ರಿಯಗಳಿಗೆ ಗಾಯವಾಗಿದ್ದರೆ, ಅಥವಾ ಗಾಯ ಗುಣವಾಗುತ್ತಿಲ್ಲ ಎಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ. ಪ್ರಥಮ ಚಿಕಿತ್ಸೆ ಕೇವಲ ಆರಂಭಿಕ ನೆರವು ಮಾತ್ರ, ಸರಿಯಾದ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ.
ದೀಪಾವಳಿಯ ಸುರಕ್ಷಿತ ಆಚರಣೆ:
-
ಸಡಿಲವಾದ ಬಟ್ಟೆಗಳನ್ನು ತಪ್ಪಿಸಿ. ಸಂಪೂರ್ಣವಾಗಿ ಬಟ್ಟೆ ಮುಚ್ಚುವ ಕೋಟ್ ಧರಿಸಿ.
-
ಮಕ್ಕಳು ಪಟಾಕಿ ಸಿಡಿಸುವಾಗ ವಯಸ್ಕರ ಮೇಲ್ವಿಚಾರಣೆ ಅನಿವಾರ್ಯ.
-
ನೀರಿನ ಬಕೆಟ್ ಅನ್ನು ಹತ್ತಿರದಲ್ಲೇ ಇರಿಸಿ.
ದೀಪಾವಳಿಯ ಬೆಳಕು ಸಂತೋಷ ತರಲಿ, ನೋವು ತರಬಾರದು. ಎಚ್ಚರಿಕೆಯಿಂದ ಆಚರಿಸಿ, ಸುರಕ್ಷಿತರಾಗಿರಿ