ಲಂಡನ್: ಸಾಕುಪ್ರಾಣಿಗಳ ಮೇಲಿನ ಪ್ರೀತಿ ಕೆಲವೊಮ್ಮೆ ಜೀವಕ್ಕೆ ಸಂಚಕಾರ ತರಬಹುದು ಎಂಬುದಕ್ಕೆ ಯುಕೆಯ 52 ವರ್ಷದ ಮಂಜಿತ್ ಸಂಘ ಅವರ ಜೀವನದಲ್ಲಿ ನಡೆದ ಘಟನೆಯೇ ಸಾಕ್ಷಿ. ತನ್ನ ಪ್ರೀತಿಯ ನಾಯಿ ಕೈ ಮೇಲಿದ್ದ ಸಣ್ಣ ಗಾಯವನ್ನು ನೆಕ್ಕಿದ್ದರಿಂದ ಉಂಟಾದ ಸೋಂಕು, ಕೊನೆಗೆ ಆಕೆಯ ಎರಡು ಕೈ ಮತ್ತು ಎರಡು ಕಾಲುಗಳನ್ನ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ.
24 ಗಂಟೆಯಲ್ಲಿ ಬದಲಾದ ಬದುಕು
ಜುಲೈ 2025 ರಲ್ಲಿ ನಡೆದ ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಶನಿವಾರದವರೆಗೆ ನಾಯಿಯೊಂದಿಗೆ ಆಟವಾಡುತ್ತಾ ಆರೋಗ್ಯವಾಗಿದ್ದ ಮಂಜಿತ್, ಭಾನುವಾರ ಕೆಲಸದಿಂದ ಮರಳಿದಾಗ ಅಸ್ವಸ್ಥರಾಗಿದ್ದರು. ಸೋಮವಾರ ಬೆಳಿಗ್ಗೆ ವೇಳೆಗೆ ಅವರು ಪ್ರಜ್ಞಾಹೀನರಾಗಿದ್ದರು. ಅವರ ಕೈಕಾಲುಗಳು ಮಂಜುಗಡ್ಡೆಯಂತೆ ತಣ್ಣಗಾಗಿದ್ದವು ಮತ್ತು ತುಟಿಗಳು ನೇರಳೆ ಬಣ್ಣಕ್ಕೆ ತಿರುಗಿದ್ದವು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ‘ಸೆಪ್ಸಿಸ್’ (Sepsis) ಗೆ ತುತ್ತಾಗಿರುವುದು ಪತ್ತೆಯಾಯಿತು.
ಬರೋಬ್ಬರಿ 32 ವಾರಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಮಂಜಿತ್, ಆರು ಬಾರಿ ಹೃದಯಾಘಾತವನ್ನು ಅನುಭವಿಸಿದರು. ಸೋಂಕು ಇಡೀ ದೇಹಕ್ಕೆ ಹರಡುವುದನ್ನು ತಡೆಯಲು ವೈದ್ಯರು ಅನಿವಾರ್ಯವಾಗಿ ಅವರ ಮೊಣಕಾಲಿನ ಕೆಳಗೆ ಎರಡೂ ಕಾಲುಗಳನ್ನು ಮತ್ತು ಎರಡೂ ಕೈಗಳನ್ನು ಕತ್ತರಿಸಬೇಕಾಯಿತು.
ಕಾರಣವೇನು ?
ನಾಯಿಗಳ ಲಾಲಾರಸದಲ್ಲಿ ಕ್ಯಾಪ್ನೋಸೈಟೋಫಗಾ ಕ್ಯಾನಿಮೊರ್ಸಸ್ (Capnocytophaga Canimorsus) ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಇದು ನಾಯಿಗಳಿಗೆ ಹಾನಿಕಾರಕವಲ್ಲ, ಆದರೆ ಮನುಷ್ಯರ ರಕ್ತಪ್ರವಾಹಕ್ಕೆ ಪ್ರವೇಶಿಸಿದರೆ ಅಪಾಯಕಾರಿ. ಮಂಜಿತ್ ಅವರ ಕೈ ಮೇಲಿದ್ದ ಸಣ್ಣ ಗಾಯವನ್ನು ನಾಯಿ ನೆಕ್ಕಿದಾಗ, ಈ ಬ್ಯಾಕ್ಟೀರಿಯಾ ಅವರ ದೇಹ ಸೇರಿ ‘ಸೆಪ್ಸಿಸ್’ ಉಂಟುಮಾಡಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಏನಿದು ಸೆಪ್ಸಿಸ್ ?
ಸೆಪ್ಸಿಸ್ ಎನ್ನುವುದು ಯಾವುದೇ ಸೋಂಕಿಗೆ ನಮ್ಮ ದೇಹವು ನೀಡುವ ವಿಪರೀತ ಪ್ರತಿಕ್ರಿಯೆ. ಇದರಲ್ಲಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆ (Immune System)ಯು ಕೀಟಾಣುಗಳ ವಿರುದ್ಧ ಹೋರಾಡುವ ಬದಲು, ಸ್ವತಃ ದೇಹದ ಆರೋಗ್ಯಕರ ಅಂಗಾಂಶಗಳು ಮತ್ತು ಅಂಗಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಇದು ದೇಹದಾದ್ಯಂತ ತೀವ್ರ ಉರಿಯೂತಕ್ಕೆ ಕಾರಣವಾಗಿ, ರಕ್ತದೊತ್ತಡವನ್ನು ಕುಸಿಯುವಂತೆ ಮಾಡುತ್ತದೆ. ಇದನ್ನು ‘ಸೆಪ್ಟಿಕ್ ಶಾಕ್’ ಎನ್ನಲಾಗುತ್ತದೆ.
ಸೆಪ್ಸಿಸ್‌ನ ಪ್ರಮುಖ ಲಕ್ಷಣಗಳು:
-
ಚರ್ಮದ ಮೇಲೆ ಕೆಂಪು ಅಥವಾ ಗಾಢ ಬಣ್ಣದ ದದ್ದುಗಳು.
-
ತೀವ್ರವಾದ ಚಳಿ, ನಡುಕ ಅಥವಾ ಜ್ವರ.
-
ವೇಗದ ಹೃದಯ ಬಡಿತ ಮತ್ತು ಉಸಿರಾಟದ ತೊಂದರೆ.
-
ಅತಿಯಾದ ಆಯಾಸ ಮತ್ತು ಕಡಿಮೆ ಮೂತ್ರ ವಿಸರ್ಜನೆ.
-
ತುಟಿಗಳು ಅಥವಾ ಉಗುರುಗಳು ನೀಲಿ/ನೇರಳೆ ಬಣ್ಣಕ್ಕೆ ತಿರುಗುವುದು.
ಮುನ್ನೆಚ್ಚರಿಕೆ ಏನು ?
ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ ನಿಮ್ಮ ದೇಹದ ಮೇಲೆ ಗಾಯಗಳಿದ್ದಾಗ ಪ್ರಾಣಿಗಳು ಅದನ್ನು ನೆಕ್ಕದಂತೆ ಜಾಗ್ರತೆ ವಹಿಸಬೇಕು. ಒಂದು ವೇಳೆ ನೆಕ್ಕಿದರೆ ತಕ್ಷಣ ಸೋಪಿನಿಂದ ಆ ಜಾಗವನ್ನು ತೊಳೆದುಕೊಳ್ಳಬೇಕು. ಯಾವುದೇ ಸಣ್ಣ ಸೋಂಕು ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.





