ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಇರಾನ್‌ನ ಸಂಸ್ಕರಿತ ಯುರೇನಿಯಂ ಸಂಗ್ರಹವನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಹೊಸ ರಣತಂತ್ರ ರೂಪಿಸುತ್ತಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ. ಸಂಧಾನ ಮಾತುಕತೆಗೆ ಇರಾನ್ ಒಪ್ಪದಿದ್ದಲ್ಲಿ, ಅಮೆರಿಕ ಸೈನ್ಯವು ನೇರವಾಗಿ ಇರಾನ್ ನೆಲಕ್ಕೆ ಸೈನಿಕರನ್ನು ಇಳಿಸಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ಇರಾನ್ ತನ್ನ ಭೂಗತ ಅಣು ಸ್ಥಾವರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿತ ಯುರೇನಿಯಂ ಸಂಗ್ರಹಿಸಿಟ್ಟಿದೆ. ಈ ಯುರೇನಿಯಂ ಭವಿಷ್ಯದಲ್ಲಿ ಅಣ್ವಸ್ತ್ರ ತಯಾರಿಕೆಗೆ ಬಳಸಬಹುದಾಗಿದೆ. ಇದೇ ಕಾರಣಕ್ಕೆ, ಈ ಸಾಮಗ್ರಿಗಳನ್ನು ನಿಷ್ಕ್ರಿಯಗೊಳಿಸುವುದು ಅಥವಾ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಮೆರಿಕದ ಪ್ರಮುಖ ಗುರಿಯಾಗಿದೆ.
ಈ ಉದ್ದೇಶಕ್ಕಾಗಿ, ಅಮೆರಿಕ ವಿಶೇಷ ತರಬೇತಿ ಪಡೆದ ಕಮಾಂಡೋ ಪಡೆಗಳನ್ನು ಹಾಗೂ ‘ಸೀಲ್’ ಮಾದರಿಯ ತಂಡಗಳನ್ನು ಬಳಸುವ ಸಾಧ್ಯತೆಯಿದೆ. ಇವು ಭೂಗತ ಸ್ಥಾವರಗಳಿಗೆ ನುಗ್ಗಿ ಅತಿ ಸೂಕ್ಷ್ಮ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಪರಿಣತರಾಗಿದ್ದಾರೆ. ಈ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ಮತ್ತು ವೇಗವಾಗಿ ನಡೆಯುವ ಸಾಧ್ಯತೆ ಇದೆ..
ಇದರ ಜೊತೆಗೆ, ಇರಾನ್‌ನ ಇಂಧನ ಸಾಮ್ರಾಜ್ಯದ ಹೃದಯ ಭಾಗವೆಂದು ಪರಿಗಣಿಸಲ್ಪಡುವ ಖರ್ಗ್ ದ್ವೀಪವೂ ಅಮೆರಿಕದ ಟಾರ್ಗೆಟ್ ಪಟ್ಟಿಯಲ್ಲಿ ಇದೆ. ಈ ದ್ವೀಪ ಇರಾನ್‌ನ ತೈಲ ರಫ್ತು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿದ್ದು, ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರಿಂದ ಇರಾನ್‌ನ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬೀಳಬಹುದು. ಹೀಗಾಗಿ, ಖರ್ಗ್ ದ್ವೀಪವನ್ನು ಕಬಳಿಸುವ ತಂತ್ರ ರೂಪಿಸಿದೆ.
ಈ ಕಾರ್ಯಾಚರಣೆಗೆ ಅಮೆರಿಕ ತನ್ನ ನೌಕಾಪಡೆ, ವಾಯುಪಡೆ ಮತ್ತು ವಿಶೇಷ ದಳಗಳನ್ನು ಮೆಡಿಟರೇನಿಯನ್ ಸಮುದ್ರ ಹಾಗೂ ಅರಬ್ಬಿ ಸಮುದ್ರ ಪ್ರದೇಶಗಳಲ್ಲಿ ಜಮಾಯಿಸುತ್ತಿದೆ ಎನ್ನಲಾಗಿದೆ. ಏರ್‌ಬೋನ್ ಸಿಬ್ಬಂದಿ, ಯುದ್ಧವಿಮಾನಗಳು ಹಾಗೂ ನೌಕಾ ಯುದ್ಧ ಹಡಗುಗಳ ನಿಯೋಜನೆ ಕೂಡ ನಡೆಯುತ್ತಿದೆ.
ಹಿಂದೆಂದಿಗಿಂತಲೂ ದೊಡ್ಡ ಮಟ್ಟದ ಸೈನಿಕ ಸಿದ್ಧತೆ ನಡೆಯುತ್ತಿದೆ.. ಇದರ ಮಧ್ಯೆ, ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ತಂತ್ರಜ್ಞಾನದ ಸಹಕಾರವೂ ಹೆಚ್ಚುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಹೀಗಾಗಿ ಇರಾನ್ ಸಂಧಾನ ಮಾತುಕತೆಗೆ ಒಪ್ಪದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
https://youtu.be/NFMuZfW56dE?si=vyVxM41betxMk0tm




