ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ, ಸಾವಿನ 131 ದಿನಗಳ ಬಳಿಕ ಗುರುವಾರ ತವರೂರು ಮಶಾದ್‌ನ ಇಮಾಮ್ ರೆಜಾ ಮಸೀದಿಯಲ್ಲಿ ನೆರವೇರಿತು. ಜುಲೈ 4ರಿಂದ ಆರಂಭವಾದ ಆರು ದಿನಗಳ ಧಾರ್ಮಿಕ ವಿಧಿವಿಧಾನಗಳ ಬಳಿಕ ಅಂತಿಮ ಸಂಸ್ಕಾರ ನಡೆದಿದ್ದು, ಖಮೇನಿ ಅವರೊಂದಿಗೆ ಮೃತಪಟ್ಟಿದ್ದ ಕುಟುಂಬ ಸದಸ್ಯರನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ.
ಖಮೇನಿ ಅವರ ಪಾರ್ಥಿವ ಶರೀರವನ್ನು ಇರಾನ್‌ನ ಪ್ರಮುಖ ಧಾರ್ಮಿಕ ನಗರ ಕೋಂ ಸೇರಿದಂತೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಿಯಾ ಮುಸ್ಲಿಂ ಸಂಪ್ರದಾಯದಂತೆ ನಡೆದ ಈ ವಿಧಿವಿಧಾನಗಳ ವೇಳೆ ಇರಾನ್ ಹಾಗೂ ಇರಾಕ್‌ನಲ್ಲಿ ಭಾರೀ ಜನಸ್ತೋಮ ಸೇರಿದ್ದರೆ, ಒಟ್ಟಾರೆ ಸುಮಾರು 3 ಕೋಟಿ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಶವಪೆಟ್ಟಿಗೆಯನ್ನು ಹೊತ್ತ ವಿಮಾನ ಮಶಾದ್‌ಗೆ ಆಗಮಿಸುವಾಗ ಅದಕ್ಕೆ ಫೈಟರ್ ಜೆಟ್ ಬೆಂಗಾವಲು ನೀಡಿರುವುದು ಗಮನಸೆಳೆಯಿತು.
ಮಶಾದ್‌ನಲ್ಲಿ ನಡೆದ ಅಂತಿಮ ಸಮಾರಂಭದಲ್ಲಿ ಸುಮಾರು 40 ಲಕ್ಷ ಜನರು ಭಾಗವಹಿಸಿದ್ದರು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಖಮೇನಿ ಅವರ ಇಚ್ಛೆಯಂತೆ ಅವರನ್ನು ಪವಿತ್ರ ಇಮಾಮ್ ರೆಜಾ ಮಸೀದಿಯಲ್ಲಿ ಸಮಾಧಿ ಮಾಡಲಾಯಿತು. ಶಿಯಾ ಇಸ್ಲಾಂನ ಎಂಟನೇ ಇಮಾಮ್ ಅಲಿ ಅಲ್-ರಿದಾ ಸಮಾಧಿಯನ್ನು ಹೊಂದಿರುವ ಈ ಮಸೀದಿ ವಿಶ್ವದ ಅತಿದೊಡ್ಡ ಮಸೀದಿ ಸಂಕೀರ್ಣಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಕೋಟ್ಯಂತರ ಭಕ್ತರು ಇಲ್ಲಿ ಯಾತ್ರೆ ಕೈಗೊಳ್ಳುತ್ತಾರೆ.
1989ರಿಂದ ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರಾಗಿದ್ದ ಖಮೇನಿ, 2026ರ ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಾವನ್ನಪ್ಪಿದ್ದರು. ಇದರಿಂದ ಅವರ 37 ವರ್ಷಗಳ ಆಡಳಿತಕ್ಕೆ ಅಂತ್ಯ ಕಂಡಿತ್ತು. ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿದ್ದ ಯುದ್ಧ ಪರಿಸ್ಥಿತಿಯ ಕಾರಣ ಅಂತ್ಯಸಂಸ್ಕಾರ ಮುಂದೂಡಲಾಗಿತ್ತು. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯಾದ ಬಳಿಕ ಜುಲೈ 4ರಿಂದ ಅಂತಿಮ ವಿಧಿವಿಧಾನಗಳನ್ನು ಆರಂಭಿಸಿ ಆರು ದಿನಗಳ ಕಾಲ ನಡೆಸಲಾಯಿತು.
ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಬೇಕೆಂದು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಖಾಲೀಬಾಫ್ ಕರೆ ನೀಡಿದ್ದ ಹಿನ್ನೆಲೆ, ದೇಶದ ನಾನಾ ಭಾಗಗಳಿಂದ ಜನರು ಮಶಾದ್‌ಗೆ ಹರಿದುಬಂದರು. ಸ್ಥಳೀಯ ಗವರ್ನರ್ ಹಸನ್ ಹುಸೇನಿ ಅವರ ಪ್ರಕಾರ, ಸುಮಾರು 1.5 ಕೋಟಿಗೂ ಅಧಿಕ ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜನರು ಶಿಯಾ ಪಂಗಡದ ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳನ್ನು ಹಿಡಿದು ಅಮೆರಿಕ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದರ ನಡುವೆ, ಖಮೇನಿ ಅವರ ಅಂತ್ಯಕ್ರಿಯೆಯ ದಿನವೇ ಫೆಬ್ರವರಿ 28ರಂದು ಅವರ ನಿವಾಸದ ಮೇಲೆ ನಡೆದಿದ್ದ ದಾಳಿಯ 35 ಸೆಕೆಂಡುಗಳ ವಿಡಿಯೊವನ್ನು ಇರಾನ್ ಮಾಧ್ಯಮಗಳು ಬಿಡುಗಡೆ ಮಾಡಿವೆ. ಅಮೆರಿಕ-ಇಸ್ರೇಲ್ ಜಂಟಿ ಕ್ಷಿಪಣಿ ದಾಳಿಯಿಂದ ವಸತಿ ಸಮುಚ್ಚಯ ಸಂಪೂರ್ಣ ಧ್ವಂಸಗೊಂಡ ದೃಶ್ಯಗಳು ಅದರಲ್ಲಿ ಕಾಣಿಸಿಕೊಂಡಿವೆ.
ಗುರುವಾರ ಬೆಳಗ್ಗೆ ನಡೆಯಬೇಕಿದ್ದ ಅಂತಿಮ ವಿಧಿವಿಧಾನಗಳು, ಇರಾನ್ ಮೇಲಿನ ಅಮೆರಿಕದ ಹೊಸ ವೈಮಾನಿಕ ದಾಳಿಯಿಂದ ಕೆಲವು ಗಂಟೆಗಳ ಕಾಲ ವಿಳಂಬವಾದವು. 20 ದಿನಗಳ ಹಿಂದೆ ಜಾರಿಯಾದ ಕದನ ವಿರಾಮದಿಂದ ಶಾಂತಿ ನೆಲೆಸಲಿದೆ ಎನ್ನುವ ನಿರೀಕ್ಷೆ ಮೂಡಿದ್ದರೂ, ಇದೀಗ ಮತ್ತೆ ಅಮೆರಿಕ-ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಹೋರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಭಾರತಕ್ಕೆ ಹೊರಟಿದ್ದ ಹಡಗು ಸೇರಿದಂತೆ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ, ಪ್ರತಿದಾಳಿಯಾಗಿ ಅಮೆರಿಕ ಬುಧವಾರ ಇರಾನ್‌ನ 80 ಸ್ಥಳಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕುವೈತ್ ಮತ್ತು ಬಹ್ರೈನ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಗುರುವಾರವೂ ಅಮೆರಿಕ ಇರಾನ್‌ನ 90 ಸ್ಥಳಗಳ ಮೇಲೆ ದಾಳಿ ನಡೆಸಿದ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಗರಿಗೆದರಿದೆ.





