ಖತರ್: ಖತರ್‌ನ ರಾಜಧಾನಿ ದೋಹಾದ ಮೇಲೆ ಇಸ್ರೇಲ್ ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿದ್ದು, ಹಮಾಸ್‌ನ ಉನ್ನತ ನಾಯಕರನ್ನು ಟಾರ್ಗೆಟ್ ಮಾಡಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಹಮಾಸ್‌ನ ಪ್ರಮುಖ ನಾಯಕ ಖಲೀಲ್ ಅಲ್-ಹಯಾ ಮೃತಪಟ್ಟಿರಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಇಸ್ರೇಲ್ ಸೇನೆ ಈ ದಾಳಿಯನ್ನು ದೇಶೀಯ ಭದ್ರತಾ ಸಂಸ್ಥೆ ಶಿನ್ ಬೆಟ್‌ನ ಸಹಕಾರದೊಂದಿಗೆ ನಡೆಸಿದೆ ಎಂದು ಅಧಿಕೃತವಾಗಿ ದೃಢಪಡಿಸಿದೆ.
ಇಸ್ರೇಲ್ ಸೇನೆಯ ಹೇಳಿಕೆಯ ಪ್ರಕಾರ, “ಹಮಾಸ್‌ನ ಬಂಡುಕೋರರನ್ನು ಸಂಪೂರ್ಣವಾಗಿ ಮಟ್ಟಹಾಕುವವರೆಗೆ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ.” ಈ ದಾಳಿಯು ಖತರ್‌ನ ರಾಜಧಾನಿಯಲ್ಲಿ ನಡೆದಿರುವ ಮೊದಲ ಇಸ್ರೇಲ್ ದಾಳಿಯಾಗಿದ್ದು, ಇದು ಮಧ್ಯಪ್ರಾಚ್ಯದ ರಾಜತಾಂತ್ರಿಕ ವಾತಾವರಣವನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.

ಖತರ್ ಸರ್ಕಾರ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, “ಇದು ಕ್ರಿಮಿನಲ್ ದಾಳಿಯಾಗಿದ್ದು, ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಮತ್ತು ಖತರ್‌ನ ನಾಗರಿಕರು ಹಾಗೂ ವಿದೇಶಿ ನಿವಾಸಿಗಳ ಭದ್ರತೆಗೆ ನೇರ ಬೆದರಿಕೆಯಾಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ದಾಳಿಯಿಂದ ಖತರ್‌ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ಖಂಡಿಸಿರುವ ಖತರ್, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಈ ಘಟನೆಯಿಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಖತರ್‌ನಂತಹ ತಟಸ್ಥ ಮಧ್ಯಸ್ಥಿಕೆ ವಹಿಸುವ ರಾಷ್ಟ್ರದ ಮೇಲೆ ದಾಳಿ ನಡೆದಿರುವುದು ಜಾಗತಿಕ ಗಮನ ಸೆಳೆದಿದೆ. ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆಗೆ ಈ ದಾಳಿಯು ದೊಡ್ಡ ಪರೀಕ್ಷೆಯಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.





