ಥಾಯ್ಲೆಂಡ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಪಬ್‌ಯೊಂದರಲ್ಲಿ ಭೀಕರ ಅಗ್ನೊ ಅವಘಡ ಸಂಭವಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. 63 ಮಂದಿ ಗಾಯಗೊಂಡಿದ್ದಾರೆ.
ಥಾಯ್ ರಾಜಧಾನಿ ಬ್ಯಾಂಕಾಕ್ನ ಉತ್ತರ ಭಾಗದಲ್ಲಿರುವ ‘ನಾ ಲಾಡ್ಪ್ರಾವ್’ ಎಂಬ ಜನಪ್ರಿಯ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಸುಮಾರು 12:30 ಗಂಟೆಗೆ ಈ ದುರಂತ ಸಂಭವಿಸಿದ್ದು, ಇದುವರೆಗಿನ ಮಾಹಿತಿಯ ಪ್ರಕಾರ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ ಮತ್ತು 63 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 22 ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ.
ಘಟನೆಯ ಸಮಯದಲ್ಲಿ ಪಬ್‌ನಲ್ಲಿ ಹಲವಾರು ಯುವಕರು ಸಂಗೀತದ ತಾಳಕ್ಕೆ ಕುಣಿಯುತ್ತಿದ್ದರು. ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರರೊಬ್ಬರು, ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡು, ಸರ್ಕ್ಯೂಟ್ ಬ್ರೇಕರ್‌ನಿಂದ ಹೊಗೆ ಹೊರಬರುವುದನ್ನು ಗಮನಿಸಿದರು.
ಕೆಲವೇ ಸೆಕೆಂಡುಗಳಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಸಿತು ಮತ್ತು ದಟ್ಟವಾದ ಕಪ್ಪು ಹೊಗೆ ಪಬ್‌ನ ಒಳಭಾಗವನ್ನು ತುಂಬಿಕೊಂಡಿತು. ಪಬ್ ಮುಂಭಾಗದ ಬಾಗಿಲಿನಿಂದ ಭಾರಿ ಬೆಂಕಿ ಹರಡಿತ್ತು. ದಟ್ಟ ಹೊಗೆಯಲ್ಲಿ ಉಸಿರು ಕಟ್ಟಿಕೊಂಡು, ಜನರು ಒಬ್ಬರ ಮೇಲೊಬ್ಬರು ಬಿದ್ದು, ಜೀವ ಉಳಿಸಿಕೊಳ್ಳಲು ಪೈಪೋಟಿ ನಡೆಸಿದರು.
ಬೆಂಕಿಯಿಂದ ಪಾರಾಗಲು ಹಲವರು ಪಬ್‌ನ ಹಿಂಭಾಗದಲ್ಲಿರುವ ಶೌಚಾಲಯಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ, ದಟ್ಟವಾದ ಹೊಗೆ ಮತ್ತು ಬೆಂಕಿಯು ಅಲ್ಲಿಗೂ ವ್ಯಾಪಿಸಿದ್ದರಿಂದ ಅವರು ಸಿಲುಕಿಕೊಂಡರು. ಪಬ್‌ನ ಹಿಂಭಾಗದ ಶೌಚಾಲಯಗಳಲ್ಲಿ ಅನೇಕ ಮೃತದೇಹಗಳು ಪತ್ತೆಯಾಗಿವೆ ಎಂದು ರಕ್ಷಣಾ ಸಿಬ್ಬಂದಿ ಮತ್ತು ಥಾಯ್ ಪ್ರಧಾನಿ ಅನುಟಿನ್ ಚಾರ್ನ್ವಿರಕುಲ್ ದೃಢಪಡಿಸಿದ್ದಾರೆ. ಪಬ್‌ನ ಬಾಗಿಲಿನ ಸಮೀಪವೂ ಹಲವು ಮೃತದೇಹಗಳು ಬಿದ್ದಿರುವುದು ಕಂಡುಬಂದಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವರು ಕಿಟಕಿಗಳನ್ನು ಒಡೆದು ಹಾರಿದರೆ, ಇನ್ನು ಕೆಲವರು ಮೇಲ್ಛಾವಣಿಯ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಾಹಿತಿ ತಲುಪಿದ ತಕ್ಷಣವೇ ಸ್ಥಳೀಯ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಭಾರಿ ಪ್ರಮಾಣದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು ಸುಮಾರು ಅರ್ಧ ಗಂಟೆ ಕಠಿಣ ಪರಿಶ್ರಮ ಪಟ್ಟರು. ಬೆಂಕಿ ಆರಿಸಿದ ನಂತರ ತೆಗೆದ ಛಾಯಾಚಿತ್ರಗಳಲ್ಲಿ ಸುಟ್ಟುಹೋದ ಮೇಜುಗಳು, ಕುರ್ಚಿಗಳು, ಚಾವಣಿಯ ಕೆಲವು ಭಾಗಗಳು ಕುಸಿದು ಬಿದ್ದಿರುವ ದೃಶ್ಯಗಳು ಕಂಡುಬಂದಿವೆ.





