ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಅಮೆರಿಕ ದೇಶವು ಇದೀಗ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವು ಈಗಾಗಲೇ ನೂರಾರು ಅಣುಬಾಂಬ್‌ಗಳನ್ನು ಹೊಂದಿರುವ ಬೆನ್ನಲ್ಲೇ, ಈಗ ಬಾಹ್ಯಾಕಾಶದಲ್ಲೂ (Space) ಆಯುಧಗಳನ್ನು ನಿಯೋಜಿಸುತ್ತಿದೆ ಎಂಬ ಮಾಹಿತಿ ಹೊರಬಂದಿರುವುದು ಹಲವರಲ್ಲಿ ಭೀತಿ ಹಾಗೂ ಆಶ್ಚರ್ಯ ಮೂಡಿಸಿದೆ.
ಬಾಹ್ಯಾಕಾಶದಲ್ಲೂ ಆಯುಧಗಳಿಟ್ಟ ಅಮೆರಿಕ? ಒಂದು ಕಾಲದಲ್ಲಿ “ಯಾರೂ ಕೂಡ ಬಾಹ್ಯಾಕಾಶದಲ್ಲಿ ಆಯುಧಗಳನ್ನು ತಯಾರಿಸಬಾರದು ಮತ್ತು ಬಳಸಬಾರದು” ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದ ಅಮೆರಿಕವೇ ಇಂದು ಆ ನಿಯಮಗಳನ್ನು ಮೀರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು, ಚೀನಾದಂತೆ ಅಮೆರಿಕ ಕೂಡ ಈಗ ಆಕಾಶದಲ್ಲೇ ಯುದ್ಧ ಸಾರಲು ಸಜ್ಜಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ.
ಚೀನಾದಿಂದಲೂ ಬಾಹ್ಯಾಕಾಶ ಅಸ್ತ್ರಗಳ ಬಳಕೆ
ಮೂಲಗಳ ಪ್ರಕಾರ, ಚೀನಾ ಈಗಾಗಲೇ ಬಾಹ್ಯಾಕಾಶದಲ್ಲಿ ಆಂಟಿ-ಸ್ಯಾಟಲೈಟ್ (Anti-Satellite), ಕೋ-ಆರ್ಬಿಟಲ್ ಸ್ಯಾಟಲೈಟ್ಗಳು, ಲೇಸರ್ ಆಯುಧಗಳು ಹಾಗೂ ಎಲೆಕ್ಟ್ರಾನಿಕ್ ಮತ್ತು ಸೈಬರ್ ಯುದ್ಧಕ್ಕೆ ಬೇಕಾದ ಅಸ್ತ್ರಗಳನ್ನು ಕೊಂಡುಕೊಳ್ಳುತ್ತಿದೆ ಎನ್ನಲಾಗಿದೆ. ಚೀನಾದ ಬಳಿ ಈ ರೀತಿಯ ತಂತ್ರಜ್ಞಾನವಿರುವುದು ಭವಿಷ್ಯದಲ್ಲಿ ಶತ್ರು ರಾಷ್ಟ್ರಗಳ ಮೇಲೆ ಅದು ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
ಆಕಾಶದಲ್ಲೇ ನಡೆಯುತ್ತಾ ಮುಂದಿನ ಯುದ್ಧ? ಇಷ್ಟು ದಿನ ಭೂಮಿಯ ಮೇಲಷ್ಟೇ ನಡೆಯುತ್ತಿದ್ದ ಯುದ್ಧಗಳು ಮುಂದಿನ ದಿನಗಳಲ್ಲಿ ಆಕಾಶಕ್ಕೂ ವಿಸ್ತರಿಸಲಿವೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ. ಆದರೆ ಈ ಬೆಳವಣಿಗೆಯು ಜಾಗತಿಕ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.
ಭಾರತಕ್ಕೆ ಎಚ್ಚರಿಕೆಯ ಗಂಟೆ
ಅಮೆರಿಕ ಮತ್ತು ಚೀನಾದ ಈ ಬಾಹ್ಯಾಕಾಶ ಯುದ್ಧದ ಪೈಪೋಟಿ ಭಾರತಕ್ಕೂ ಕೂಡ ನೇರ ಸವಾಲSಗಲಿದೆ ಎನ್ನಬಹುದು. ಈಗಾಗಲೇ ಚೀನಾ ಭಾರತದ ಗಡಿಯಲ್ಲಿ ವಿವಿಧ ರೀತಿಯ ತಕರಾರುಗಳನ್ನು ತೆಗೆಯುತ್ತಿದ್ದು, ಭವಿಷ್ಯದ ಇಂತಹ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಆಧಾರಿತ ಯುದ್ಧಗಳನ್ನು ಎದುರಿಸಲು ಭಾರತವೂ ಕೂಡ ತನ್ನ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕಿದೆ. ಒಟ್ಟಿನಲ್ಲಿ, ಅಮೆರಿಕ ಹಾಗೂ ಚೀನಾದ ಈ ನಡೆ ಭಾರತಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.





