ಬೆಳಗಾವಿ: ಕೇವಲ 5,000 ರೂಪಾಯಿಗಳಿಗಾಗಿ ಯುವ ಜನಪದ ಗಾಯಕ ಮಾರುತಿ ಅಡಿವೆಪ್ಪ ಲಠ್ಠೆ (22) ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿದೆ. ಉತ್ತರ ಕರ್ನಾಟಕ ಶೈಲಿಯ ಜನಪದ ಹಾಡುಗಳನ್ನು ರಚಿಸಿ, ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿ ಜನಪ್ರಿಯತೆ ಗಳಿಸಿದ್ದ ಮಾರುತಿ, ಈ ದುರಂತದಿಂದ ಸಂಗೀತ ಪ್ರೇಮಿಗಳಿಗೆ ಆಘಾತವನ್ನುಂಟುಮಾಡಿದ್ದಾನೆ.
ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಆರೋಪಿ ಈರಪ್ಪ ಅಕ್ಕಿವಾಟೆ ಮತ್ತು ಆತನ ಗ್ಯಾಂಗ್‌ನವರು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರಿನಿಂದ ಹಾಯಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಈರಪ್ಪ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ. ಈರಪ್ಪನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಗೆ ಕಾರಣ:
ಮಾರುತಿ ಈರಪ್ಪ ಅಕ್ಕಿವಾಟೆಯಿಂದ 50,000 ರೂಪಾಯಿ ಸಾಲವನ್ನು ಕಬ್ಬಿನ ಕಟಾವು ಗ್ಯಾಂಗ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪಡೆದಿದ್ದ. ಈ ಸಾಲದ 45,000 ರೂಪಾಯಿಗಳನ್ನು ಆತ ಮರಳಿಸಿದ್ದ. ಆದರೆ, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳಿಗೆ ಜನಪ್ರಿಯತೆ ಗಳಿಸಿದ ನಂತರ, ಮಾರುತಿ ಕಬ್ಬಿನ ಕಟಾವು ಕೆಲಸವನ್ನು ಬಿಟ್ಟು ಸಂಗೀತದ ಮೇಲೆ ಗಮನ ಕೇಂದ್ರೀಕರಿಸಿದ್ದ. ಇದು ಈರಪ್ಪನ ಆಕ್ರೋಶಕ್ಕೆ ಕಾರಣವಾಯಿತು. ಬಾಕಿ ಇದ್ದ 5,000 ರೂಪಾಯಿಗಳನ್ನು ಮರಳಿಸದಿರುವುದರಿಂದ ಕುಪಿತನಾದ ಈರಪ್ಪ, ತನ್ನ ಗ್ಯಾಂಗ್‌ನೊಂದಿಗೆ ಈ ಭೀಕರ ಕೃತ್ಯವನ್ನು ಎಸಗಿದ್ದಾನೆ.
ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಸಿದ್ದರಾಮ ವಡೆಯರ್ ಮತ್ತು ಆಕಾಶ್ ಪೂಜಾರಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಪೊಲೀಸರು ಬೀಸಿದ್ದಾರೆ.
ಈ ಘಟನೆ ಉತ್ತರ ಕರ್ನಾಟಕದ ಸಂಗೀತಾಸಕ್ತರಿಗೆ ದೊಡ್ಡ ಆಘಾತವನ್ನುಂಟುಮಾಡಿದೆ. ಮಾರುತಿಯ ಜನಪದ ಹಾಡುಗಳು ಯುವ ಜನರ ಮನಸ್ಸಿನಲ್ಲಿ ಗಾಢವಾದ ಛಾಪು ಮೂಡಿಸಿದ್ದವು. ಈ ಕೊಲೆಯಿಂದ ರಾಯಬಾಗದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.