ದೀರ್ಘ ಕಾಯುವಿಕೆಯ ನಂತರ ಕೊನೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಗೆ ಯಾದಗಿರಿ ಜಿಲ್ಲೆಯಲ್ಲಿ ಪಥಸಂಚಲನ ನಡೆಸಲು ಅನುಮತಿ ದೊರೆತಿದೆ. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಾಳೆ (ನವೆಂಬರ್ 4) ಬೆಳಿಗ್ಗೆ ನಡೆಯಲಿರುವ ಈ ಪರೇಡ್‌ಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು 10 ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಲಾಗಿದೆ.
ದೀರ್ಘಕಾಲದಿಂದ RSS ಸಂಘಟನೆಯು ಕೆಂಭಾವಿ ಪಟ್ಟಣದಲ್ಲಿ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿತ್ತು. ಪೊಲೀಸ್ ಇಲಾಖೆಯ ಸಂಪೂರ್ಣ ವರದಿ ಮತ್ತು ಸ್ಥಳೀಯ ಪರಿಸ್ಥಿತಿ ಪರಿಶೀಲಿಸಿದ ನಂತರ ಡಿಸಿ ಹರ್ಷಲ್ ಭೋಯರ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ, ಮಾರಕಾಸ್ತ್ರಗಳನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಯಾವುದೇ ಕೋಮುಗಲಭೆ ಅಥವಾ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.
ಪಥಸಂಚಲನಕ್ಕೆ 10 ಕಟ್ಟುನಿಟ್ಟಾದ ಷರತ್ತುಗಳು
ಜಿಲ್ಲಾಧಿಕಾರಿಗಳು ವಿಧಿಸಿರುವ 10 ಷರತ್ತುಗಳು ಈ ಕೆಳಗಿನಂತಿವೆ:
- ಆಸ್ತಿಪಾಸ್ತಿಗಳಿಗೆ ನಷ್ಟವಾದರೆ ನಷ್ಟ ಭರಿಸಬೇಕು.
- ಪೊಲೀಸ್ ನಿಗದಿ ಪಡಿಸಿದ ಮಾರ್ಗ ಮಾತ್ರ ಬಳಸಬೇಕು.
- ಕೋಮುಗಲಭೆ ಉಂಟಾಗುವ ಚಟುವಟಿಕೆ ಮಾಡುವಂತಿಲ್ಲ.
- ಪಥಸಂಚಲನ ವೇಳೆ ರಸ್ತೆ ಬಂದ್ ಮಾಡಬಾರದು.
- ಪಥಸಂಚಲನ ವೇಳೆ ಮಾರಕಾಸ್ತ್ರ ಬಳಸಬಾರದು.
- ಆಸ್ತಿ ಪಾಸ್ತಿ ನಷ್ಟ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಾರದು.
- ಪಥಸಂಚಲನ ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸುವಂತಿಲ್ಲ.
- ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಸಂಘಟನೆಯೇ ಹೊಣೆ.
- ಯಾವುದೇ ಹಿಂಸಾಚಾರ ನಡೆದರೆ RSSನವರೇ ಹೊಣೆ.
- ಪೊಲೀಸ್ ಇಲಾಖೆಯ ಸೂಚನೆಗಳನ್ನ ಪಾಲಿಸಬೇಕು.
ಯಾಕೆ ವಿಳಂಬವಾಯಿತು?ಹಿಂದಿನ ದಿನಗಳಲ್ಲಿ RSS ಪಥಸಂಚಲನಕ್ಕೆ ಅನುಮತಿ ನಿರಾಕರಣೆಯಾಗಿತ್ತು. ಆದರೆ ಪೊಲೀಸ್ ಇಲಾಖೆಯ ಸಕಾರಾತ್ಮಕ ವರದಿ ಮತ್ತು ಸ್ಥಳೀಯ ಆಡಳಿತದ ಸಹಕಾರದಿಂದ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ.ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿಗಿ ಬಂದೋಬಸ್ತ್ ಒಡ್ಡಿದ್ದು, ಕೆಂಭಾವಿ ಪಟ್ಟಣದಲ್ಲಿ ಡ್ರೋನ್ ನಿಗಾ ಮತ್ತು ಅತಿರಿಕ್ತ ಪೊಲೀಸ್ ನಿಯೋಜಿಸಲಾಗಿದೆ. ಸಾರ್ವಜನಿಕರು ಶಾಂತಿಯುತವಾಗಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.ಆರ್‌ಎಸ್‌ಎಸ್ ಪಥಸಂಚಲನಕ್ಕೆ ಬ್ರೇಕ್: ನವೆಂಬರ್ 5ರಂದು ಶಾಂತಿ ಸಭೆ
ಕಲಬುರಗಿ : ಚಿತ್ತಾಪುರದಲ್ಲಿ ನವೆಂಬರ್ 2ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಯೋಜಿಸಿದ್ದ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್, ಮತ್ತೊಂದು ಶಾಂತಿ ಸಭೆಯನ್ನು ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆಸಲು ಸೂಚಿಸಿದ್ದಾರೆ. ಈ ಸಭೆಯಲ್ಲಿ ಅರ್ಜಿದಾರರು ಮತ್ತು ಅವರ ವಕೀಲರು ಕಡ್ಡಾಯವಾಗಿ ಹಾಜರಾಗಬೇಕೆಂದು ಕೋರ್ಟ್ ಆದೇಶಿಸಿದ್ದು, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಈ ನಿರ್ಧಾರದಿಂದ ಆರ್‌ಎಸ್‌ಎಸ್‌ಗೆ ತಾತ್ಕಾಲಿಕ ಹಿನ್ನಡೆಯಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಶಾಂತಿ ಸಭೆಗೆ ರಿಟ್ ಅರ್ಜಿದಾರರು ಹಾಜರಾಗದಿರುವುದರಿಂದ ವಿವಾದವನ್ನು ಶೀಘ್ರವಾಗಿ ಬಗೆಹರಿಸಲು ಸಹಕಾರವಿಲ್ಲ ಎಂದು ಆರೋಪಿಸಿದರು. ಅರ್ಜಿದಾರರ ಬದಲಿಗೆ ಬೇರೆ ವ್ಯಕ್ತಿಗಳು ಸಭೆಗೆ ಹಾಜರಾಗಿದ್ದರು ಎಂದು ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಆರ್‌ಎಸ್‌ಎಸ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿದ್ದರಿಂದ ಅವರು ಸಭೆಗೆ ಆಗಮಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಶಾಂತಿ ಸಭೆಗೆ ಅರ್ಜಿದಾರರಿಗೆ ಆಹ್ವಾನವೇ ಇರಲಿಲ್ಲ ಎಂದು ಅವರು ವಾದಿಸಿದರು.





