ಸಿಲಿಕಾನ್ ಸಿಟಿಯ ಗೌಡಹಳ್ಳಿಯಲ್ಲಿ ನಡೆದ ಮಹಿಳೆಯೊಬ್ಬರ ಸಾವು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಸುಜಾತ (30) ಎಂಬುವವರು ಮೃತಪಟ್ಟಿದ್ದು, ಈ ಸಾವಿನ ಹಿಂದೆ ಪತಿಯ ಸಂಚು ಇರಬಹುದು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ :
ಮೃತ ಸುಜಾತ ಅವರು ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ಪುತ್ರಿ. 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ಮದುವೆಯಾಗಿದ್ದರು. ಸೋಮವಾರ ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಲು ಹೋದಾಗ ವಿದ್ಯುತ್ ಆಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೋಷಕರ ಶಂಕೆ: ಒಂದು ವಾರದ ಹಿಂದಷ್ಟೇ ತವರು ಮನೆಯಿಂದ ಬಂದಿದ್ದರು. ಸುಜಾತ ಅವರ ಸಾವು ಕೇವಲ ಅಪಘಾತವಲ್ಲ ಎಂದು ಪೋಷಕರು ವಾದಿಸುತ್ತಿದ್ದಾರೆ. ಅದಕ್ಕೆ ಬಲವಾದ ಕಾರಣಗಳೂ ಇವೆ. ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ವೈಮನಸ್ಸು ಇತ್ತು ಎನ್ನಲಾಗಿದೆ. ಗಂಡನ ಕಿರುಕುಳ ತಾಳಲಾರದೆ ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು. ಚೇತನ್ ಮತ್ತು ಆತನ ತಾಯಿ ಮನವೊಲಿಸಿದ್ದಕ್ಕೆ ಕೇವಲ ಎಂಟು ದಿನಗಳ ಹಿಂದಷ್ಟೇ ಸುಜಾತ ಗೌಡಹಳ್ಳಿಯ ಮನೆಗೆ ಬಂದಿದ್ದರು. ಮನೆಗೆ ಮರಳಿದ ಕೇವಲ ಎಂಟೇ ದಿನದಲ್ಲಿ ಇಂತಹ ಘಟನೆ ನಡೆದಿರುವುದು ಪೋಷಕರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ.
ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆ :
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆ ವರದಿ ಬಂದ ನಂತರವಷ್ಟೇ ಇದು ವಿದ್ಯುತ್ ಆಘಾತದಿಂದ ಸಂಭವಿಸಿದ ಆಕಸ್ಮಿಕವೇ ಅಥವಾ ವ್ಯವಸ್ಥಿತವಾಗಿ ನಡೆದ ಕೊಲೆಯೇ ಎಂಬುದು ಸ್ಪಷ್ಟವಾಗಲಿದೆ.





