ವಿಜಯನಗರ: ಯುವತಿಯೊಬ್ಬಳು ಮದುವೆಗೆ ನಿರಾಕರಿಸಿದ ಕಾರಣಕ್ಕೆ ಆಕೆಯ ಪ್ರಿಯಕರನು ಜನನಿಬಿಡ ಸ್ಥಳದಲ್ಲಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆ ಕಾರ್ಯಾಲಯದ ಎದುರು ನಡೆದಿದೆ.
ಗಾಯಗೊಂಡ ಯುವತಿಯ ಹೆಸರು ಭಾರತಿ ಶಾವಿ (26), ಆರೋಪಿ ಯುವಕನ ಹೆಸರು ವಿಜಯಭಾಸ್ಕರ್ (26).
ಭಾರತಿ ಕಳೆದ 10 ವರ್ಷಗಳಿಂದ ಹೊಸಪೇಟೆಯಲ್ಲಿ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದಳು. ಸುಮಾರು 5 ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ವಿಜಯಭಾಸ್ಕರ್‌ನೊಂದಿಗೆ ಪರಿಚಯವಾಗಿ, ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಯುವತಿ ತನ್ನ ಸ್ವಗ್ರಾಮವಾದ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಇಬ್ಬರೂ ಆತ್ಮೀಯವಾಗಿ ಇದ್ದರು. ಆದರೆ, ಇತ್ತೀಚೆಗೆ ಭಾರತಿ ಯುವಕನಿಂದ ದೂರವಿರಲು ಪ್ರಾರಂಭಿಸಿದ್ದಳು ಮತ್ತು ಅವನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ತಿಳಿದುಬಂದಿದೆ.
ಯುವತಿಯ ನಿರಾಕರಣೆಯಿಂದ ಕೋಪಗೊಂಡ ವಿಜಯಭಾಸ್ಕರ್, ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದಿಂದ ಹೊಸಪೇಟೆಗೆ ಬಂದು, ಭಾರತಿ ಕೆಲಸಕ್ಕೆ ತೆರಳುತ್ತಿದ್ದಾಗ ಆಕೆಯ ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಹೊಸಪೇಟೆ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.