ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಚಪ್ಪಲಿ ಮತ್ತು ಫ್ಲಾಶ್‌ಲೈಟ್‌ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಓವರ್‌ಟೇಕ್ ಮಾಡುವಾಗ ಬಸ್‌ನಿಂದ ಬೈಕ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಆರೋಪಿಸಿ ಈ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಾರ್ವಜನಿಕರು ಮತ್ತು ಸಾರಿಗೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹರಿಹರ ಘಟಕಕ್ಕೆ ಸೇರಿದ KSRTC ಬಸ್ ಬಳ್ಳಾರಿಗೆ ತೆರಳುತ್ತಿತ್ತು. ಕೊಟ್ಟೂರು-ಕೂಡ್ಲಿಗಿ ರಸ್ತೆಯ ಮಲ್ಲನಾಯಕಹಳ್ಳಿ ಬಳಿ ಬಸ್ ಚಾಲಕ ರಾಮಲಿಂಗಪ್ಪ, ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಇನ್ನೊಬ್ಬ ಕಾನ್ಸ್‌ಟೇಬಲ್ ಇದ್ದ ಬೈಕ್‌ನ್ನು ಓವರ್‌ಟೇಕ್ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಎದುರಿನಿಂದ ಕಾರೊಂದು ಬಂದಿದ್ದರಿಂದ, ರಾಮಲಿಂಗಪ್ಪ ಬಸ್‌ನ್ನು ಎಡಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ಬಸ್‌ನ ಹಿಂಭಾಗ ಬೈಕ್‌ನ ಹ್ಯಾಂಡಲ್‌ಗೆ ತಾಗಿದೆ.
ರಾಮಲಿಂಗಪ್ಪ ರಿಯರ್-ವ್ಯೂ ಮಿರರ್‌ನಲ್ಲಿ ಬೈಕ್ ಕಾಣದ ಕಾರಣ ಮುಂದೆ ಸಾಗಿದ್ದಾರೆ. ಆದರೆ, ಇದರಿಂದ ಕೆರಳಿದ ಮಂಜುನಾಥ್ ಗಜಾಪೂರ ಬಳಿ ಬಸ್‌ನ್ನು ತಡೆದು, ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ತನ್ನ ಕಾಲಿನ ಚಪ್ಪಲಿಯಿಂದ ರಾಮಲಿಂಗಪ್ಪನವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಲ್ಲದೆ, ಚಾಲಕನ ಜೇಬಿನಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು, “ಸ್ಟೇಷನ್‌ಗೆ ಬಾ” ಎಂದು ಹೇಳಿ ಬಸ್‌ನಿಂದ ಇಳಿದುಹೋಗಿದ್ದಾರೆ.
ರಾಮಲಿಂಗಪ್ಪ ಬಸ್‌ನಿಂದ ಇಳಿದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿವರಿಸಿ ಮೊಬೈಲ್ ಹಿಂದಿರುಗಿಸುವಂತೆ ಕೇಳಿದಾಗ, ಮಂಜುನಾಥ್ ಮತ್ತಷ್ಟು ಕೆರಳಿ, ತನ್ನ ಕೈಯಲ್ಲಿದ್ದ ಫ್ಲಾಶ್‌ಲೈಟ್‌ನಿಂದ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರಾಮಲಿಂಗಪ್ಪನವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವರದಿಯ ಪ್ರಕಾರ, ಘಟನೆಯ ಸಂದರ್ಭದಲ್ಲಿ ಮಂಜುನಾಥ್ ಕರ್ತವ್ಯದಲ್ಲಿರಲಿಲ್ಲ. ಕರ್ತವ್ಯ ನಿರತ ಸಾರಿಗೆ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಕಾನೂನುಬಾಹಿರವಾಗಿದ್ದು, ಈ ಕೃತ್ಯವನ್ನು ಸಾರಿಗೆ ನೌಕರರು ಮತ್ತು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.
ಸಾರಿಗೆ ನೌಕರರು, “ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಕಾನೂನುಬಾಹಿರವಾಗಿದ್ದರೂ, ಪೊಲೀಸ್ ಅಧಿಕಾರಿಯಿಂದ ಇಂತಹ ಕೃತ್ಯ ನಡೆದಿರುವುದು ಖಂಡನೀಯ. ಆರೋಪಿಯನ್ನು ಕೂಡಲೇ ಬಂಧಿಸಿ, ಕೆಲಸದಿಂದ ವಜಾಗೊಳಿಸಬೇಕು,” ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರೂ ಈ ಘಟನೆಯನ್ನು ಖಂಡಿಸಿದ್ದು, ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.