ಹೊಸಪೇಟೆ: ಕಳೆದ ವರ್ಷ ಆಗಸ್ಟ್‌ನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ನೀರಿನ ಒತ್ತಡದಿಂದ ಕಿತ್ತುಕೊಂಡು ಹೋಗಿತ್ತು, ಇದರಿಂದಾಗಿ ಭಾರೀ ಪ್ರಮಾಣದ ನೀರು ವ್ಯರ್ಥವಾಗಿತ್ತು. ಈ ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದಾ ಯವಾದ ತುಂಗಭದ್ರಾದ ಈ ಘಟನೆಯ ಒಂದು ವರ್ಷದ ನಂತರ, ಈಗ ಜಲಾಶಯದ ಏಳು ಕ್ರೆಸ್ಟ್ ಗೇಟ್‌ಗಳು (ನಂ. 4, 11, 18, 20, 24, 27, ಮತ್ತು 28) ತುಕ್ಕು ಹಿಡಿದು ದುರ್ಬಲವಾಗಿವೆ ಎಂದು ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಸಮಿತಿಯ ವರದಿಯಿಂದ ತಿಳಿದುಬಂದಿದೆ. ಈ ಗೇಟ್‌ಗಳಲ್ಲಿ ಆರು ಗೇಟ್‌ಗಳನ್ನು ಮೇಲಕ್ಕೆ ಎತ್ತಲು ಅಥವಾ ಇಳಿಸಲು ಸಾಧ್ಯವಾಗುತ್ತಿಲ್ಲ, ಆದರೆ 4ನೇ ಗೇಟ್ ಕೇವಲ ಎರಡು ಅಡಿ ಮಾತ್ರ ಎತ್ತಬಹುದಾಗಿದೆ.
ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೊಪ್ಪಳದಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, “ತುಂಗಭದ್ರಾ ಜಲಾಶಯದ 31 ಗೇಟ್‌ಗಳ ಪೈಕಿ ಏಳು ಗೇಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನದಿಗೆ ಎಲ್ಲಾ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿಲ್ಲ. ಗೇಟ್‌ಗಳ ದುರಸ್ತಿಗೆ ಸರ್ಕಾರ ಬದ್ಧವಾಗಿದೆ, ಆದರೆ ತುಂಗಭದ್ರಾ ಬೋರ್ಡ್ ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯವಿದೆ,” ಎಂದು ತಿಳಿಸಿದ್ದಾರೆ.
ದುರಸ್ತಿ ಕಾರ್ಯದ ಸವಾಲುಗಳೇನು?
19ನೇ ಗೇಟ್‌ನ ದುರಸ್ತಿಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆದಾರರು ಎಂಟು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಜಲಾಶಯದ ನೀರಿನ ಸಂಗ್ರಹವನ್ನು ಗಮನದಲ್ಲಿಟ್ಟುಕೊಂಡು ದುರಸ್ತಿ ಕಾರ್ಯ ಆರಂಭಿಸಬೇಕಾಗಿದೆ. ಇದರಿಂದ ಈ ವರ್ಷ ಕೇವಲ ಒಂದು ಬೆಳೆಗೆ ಮಾತ್ರ ನೀರು ಒದಗಿಸಲು ಸಾಧ್ಯವಾಗಲಿದೆ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಜಲಾಶಯಕ್ಕೆ ಅಪಾಯವೇ?
ಪ್ರಸ್ತುತ, ಕೇವಲ ಮೂರು ಕ್ರೆಸ್ಟ್ ಗೇಟ್‌ಗಳ ಮೂಲಕವೇ ನೀರು ಬಿಡಲಾಗುತ್ತಿದೆ. ಮಲೆನಾಡಿನಲ್ಲಿ ಭಾರೀ ಮಳೆಯಿಂದ ತುಂಗಾ ಮತ್ತು ಭದ್ರಾ ನದಿಗಳಿಗೆ ಹೆಚ್ಚಿನ ನೀರು ಹರಿಯುತ್ತಿದೆ, ಇದರಿಂದ ಜಲಾಶಯ ಭರ್ತಿಯಾಗಿದೆ. ಎಲ್ಲಾ ಗೇಟ್‌ಗಳನ್ನು ತೆರೆಯಬೇಕಾದ ಸಂದರ್ಭದಲ್ಲಿ, ಏಳು ಗೇಟ್‌ಗಳು ಕಾರ್ಯನಿರ್ವಹಿಸದಿರುವುದು ಸಮಸ್ಯೆಯಾಗಿದೆ. ಆದರೂ, ಜಲಾಶಯಕ್ಕೆ ತಕ್ಷಣದ ಅಪಾಯವಿಲ್ಲ ಎಂದು ತಜ್ಞರ ತಿಳಿಸಿದ್ದಾರೆ.
ರೈತರಿಗೆ ಆತಂಕ
ತುಂಗಭದ್ರಾ ಜಲಾಶಯದ ಗೇಟ್‌ಗಳು ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸಬೇಕೆಂದು ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಕಳೆದ ವರ್ಷ 19ನೇ ಗೇಟ್ ಕೊಚ್ಚಿಹೋದಾಗ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು, ಆದರೆ ಶಾಶ್ವತ ಗೇಟ್ ಇನ್ನೂ ಅಳವಡಿಸಲಾಗಿಲ್ಲ. ಒಮ್ಮೆಲೇ 2 ಲಕ್ಷ ಕ್ಯೂಸೆಕ್ ನೀರು ಒಳಹರಿವಾದರೆ, ಏಳು ಗೇಟ್‌ಗಳು ಕಾರ್ಯನಿರ್ವಹಿಸದಿರುವುದರಿಂದ ಪರಿಸ್ಥಿತಿ ಗಂಭೀರವಾಗಬಹುದು ಎಂಬ ಆತಂಕ ರೈತರಲ್ಲಿ ಮೂಡಿದೆ. ಪ್ರಸ್ತುತ, ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು ಹೆಚ್ಚಾದರೆ ಅಪಾಯದ ಸಾಧ್ಯತೆ ಇದೆ.
ತುಂಗಭದ್ರಾ ಬೋರ್ಡ್ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ದುರಸ್ತಿ ಕಾರ್ಯ ವಿಳಂಬವಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಹಲವಾರು ಪತ್ರಗಳನ್ನು ಬರೆಯಲಾಗಿದೆ. ಗದಗದಲ್ಲಿ ಕ್ರೆಸ್ಟ್ ಗೇಟ್‌ಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ತುಂಗಭದ್ರಾ ಮಂಡಳಿ ಅಧಿಕಾರಿಗಳು ಮತ್ತು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಮಳೆಗಾಲದಲ್ಲಿ ಪ್ರವಾಹ ಉಂಟಾಗದಿದ್ದರೆ, ಅಪಾಯದಿಂದ ಪಾರಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.