ಕಲ್ಪತರು ನಾಡು ತುಮಕೂರಿನಲ್ಲಿ ಕ್ರೀಡಾ ಹಬ್ಬ ಆರಂಭವಾಗಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಚಾಲನೆಗೊಂಡ 24ನೇ ರಾಷ್ಟ್ರೀಯ ಕಿರಿಯರ (U-20) ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ದಾಖಲೆ ಮತ್ತು ಪದಕಗಳ ಬೇಟೆ ನಡೆದಿದೆ. ಪುರುಷರ ಮತ್ತು ಮಹಿಳೆಯರ 100 ಮೀಟರ್ ಓಟದಲ್ಲಿ ಕ್ರಮವಾಗಿ ಅಭಯ್ ಸಿಂಗ್ ಮತ್ತು ನಿಪಮ್ ದೇಶದ ಅತ್ಯಂತ ವೇಗದ ಕಿರಿಯ ಓಟಗಾರರಾಗಿ ಹೊರಹೊಮ್ಮಿದ್ದಾರೆ.
ವೇಗದ ಓಟದಲ್ಲಿ ಮಿಂಚಿದ ತಾರೆಯರು :
ಜೂನಿಯರ್ ಪುರುಷರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ರಿಲಯನ್ಸ್ ತಂಡದ ಅಭಯ್ ಸಿಂಗ್ ಕೇವಲ 10.41 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರು. ಜಮ್ಮು ಕಾಶ್ಮೀರದ ಯುವರಾಜ್ ಸಿಂಗ್ ಚಿಬ್ ಬೆಳ್ಳಿ ಹಾಗೂ ಉತ್ತರ ಪ್ರದೇಶದ ಅನ್ಶು ರಜಾಕ್ ಕಂಚಿನ ಪದಕ ಪಡೆದರು. ಮಹಿಳೆಯರ ವಿಭಾಗದಲ್ಲಿ ಉತ್ತರ ಪ್ರದೇಶದ ನಿಪಮ್ (11.53 ಸೆ.) ಸ್ವರ್ಣ ಪದಕ ಜಯಿಸಿದರೆ, ತಮಿಳುನಾಡಿನ ಭಾವನ ಬೆಳ್ಳಿ ಪದಕಕ್ಕೆ ತೃಪ್ತರಾದರು.
ಏಷ್ಯನ್ ಗೇಮ್ಸ್‌ಗೆ ಎಂಟ್ರಿ :
ಮಹಿಳೆಯರ ಪೋಲ್ ವಾಲ್ಟ್ ವಿಭಾಗದಲ್ಲಿ ತಮಿಳುನಾಡಿನ ಬಿ. ಸೌಂದರ್ಯ 3.60 ಮೀಟರ್ ಎತ್ತರ ಜಿಗಿಯುವ ಮೂಲಕ ಹೊಸ ಇತಿಹಾಸ ಬರೆದರು. ಈ ಸಾಧನೆಯೊಂದಿಗೆ ಅವರು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ತುಮಕೂರು ಈಗ ಕ್ರೀಡಾ ಹಬ್ :
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, “ತುಮಕೂರು ಕೇವಲ ಶೈಕ್ಷಣಿಕ ಕೇಂದ್ರವಲ್ಲ, ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೇಂದ್ರವಾಗಿ ಬೆಳೆಯುತ್ತಿದೆ. ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಹಾಕಿ ಕ್ರೀಡಾಂಗಣಗಳು ನಿರ್ಮಾಣವಾಗುತ್ತಿವೆ. ಮೇ 3ರಿಂದ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿ ಕೂಡ ನಡೆಯಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್‌ಗಳಾದ ಪ್ರಿಯಾ ಮೋಹನ್, ರೀತುಶ್ರೀ ಮತ್ತು ಎಂ. ಕೃಷಿಕ್ ಅವರನ್ನು ಗೌರವಿಸಲಾಯಿತು.





