ಶಿವಮೊಗ್ಗ ಅ.5 ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್)ಯಲ್ಲಿ ಎಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತರನ್ನು ಸೇಲಂ ಮೂಲದ ಗೋವಿಂದರಾಜು (52) ಎಂದು ಗುರುತಿಸಲಾಗಿದೆ. ಘಟನೆ ಕುರಿತು ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋವಿಂದರಾಜು ಅವರು ಕಳೆದ 10ರಿಂದ 12 ವರ್ಷಗಳಿಂದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯಲ್ಲಿ ಎಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಗೋವಿಂದರಾಜು ಅವರು ತಮ್ಮ ಪತ್ನಿಯನ್ನು ರೈಲಿನಲ್ಲಿ ಕಳುಹಿಸಿ ಕೊಟ್ಟಿದ್ದರು. ಬಳಿಕ ರಾತ್ರಿ ಮನೆಗೆ ವಾಪಸ್ ಆಗಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ಗೋವಿಂದರಾಜು ಅವರು ತಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ನಂತರ ಕಾರ್ಖಾನೆಯಲ್ಲಿ ಕೆಲವು ಕಡತಗಳಿಗೆ ಸಹಿ ಹಾಕಬೇಕಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಆದರೆ, ಅಧಿಕಾರಿಗಳು ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಇದೇ ವೇಳೆ ವಿದ್ಯುತ್ ಮೀಟರ್ ರೀಡರ್ ಕೂಡ ಗೋವಿಂದರಾಜು ಅವರ ಮನೆಗೆ ತೆರಳಿ ಬಾಗಿಲು ತಟ್ಟಿದ್ದಾರೆ. ಆದರೆ, ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿದೆ.
ನಂತರ ಕಾರ್ಖಾನೆ ಅಧಿಕಾರಿಗಳು ಗೋವಿಂದರಾಜು ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಗೋವಿಂದರಾಜು ಅವರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣವೇ ಅಥವಾ ಉದ್ಯೋಗ ಸಂಬಂಧಿತ ಕಾರಣಗಳೇನಾದರೂ ಇದ್ದವೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಿದೆ. ವಿಐಎಸ್ಎಲ್ ಕಾರ್ಖಾನೆಯ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.





