ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೋಲ್ಲಪಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ಭಾನುವಾರ ಬೆಳಿಗ್ಗೆ ಭೀಕರ ಸರಣಿ ವಾಹನ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮೂರು ಲಾರಿಗಳು, ಒಂದು ಬೊಲೆರೋ, ಮತ್ತು ಒಂದು ಬೈಕ್ ಒಟ್ಟು ಐದು ವಾಹನಗಳು ಜಖಂಗೊಂಡಿವೆ. ಅಪಘಾತದಲ್ಲಿ ವಾಹನ ಸವಾರರಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ.
ಮೂರು ದಿನಗಳ ಹಿಂದೆ ಗೋಲ್ಲಪಲಿ ಗ್ರಾಮದ ಹೊರವಲಯದಲ್ಲಿ ಒಂದು ಲಾರಿ ಪಲ್ಟಿಯಾಗಿ ಕೆಟ್ಟು ನಿಂತಿತ್ತು. ಈ ಲಾರಿಯ ಅವಶೇಷಗಳು ರಸ್ತೆಯಿಂದ ತೆರವಾಗದಿರುವುದರಿಂದ ರಸ್ತೆ ಇಕ್ಕಟ್ಟಾಗಿತ್ತು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಒಂದು ಲಾರಿಗೆ ದಾರಿ ಕೊಡಲು ಬೊಲೆರೋ ವಾಹನ ನಿಂತಿತ್ತು. ಆದರೆ, ಈ ಸಮಯದಲ್ಲಿ ಮತ್ತೊಂದು ಲಾರಿ, ಬೊಲೆರೋ, ಮತ್ತು ಬೈಕ್ ಒಂದರ ನಂತರ ಒಂದರಂತೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿತು.
ಈ ಘಟನೆಯಿಂದ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ರಸ್ತೆಯಲ್ಲಿ ವಾಹನಗಳ ಸಾಲು ಉದ್ದವಾದ ಕಾರಣ ಸ್ಥಳೀಯರಲ್ಲಿ ಆತಂಕ ಮೂಡಿತು.
ಮಾಹಿತಿ ತಿಳಿದ ಕೂಡಲೇ ಹಟ್ಟಿ ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರ ಆತಂಕ:
ಗೋಲ್ಲಪಲಿ ಗ್ರಾಮದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಅಗಲ ಕಡಿಮೆ ಇರುವುದರಿಂದ ಆಗಾಗ್ಗೆ ಸಣ್ಣ-ದೊಡ್ಡ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಸ್ತೆಯ ದಟ್ಟಣೆ ಮತ್ತು ವಾಹನ ಸಂಚಾರದ ಒತ್ತಡ ಹೆಚ್ಚಾಗುತ್ತಿರುವುದರಿಂದ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.