ನೆಲಮಂಗಲ: ಮದುವೆಯಾಗಲು ಸಂಗಾತಿ ಸಿಗದ ಕಾರಣಕ್ಕೆ ನೆಲಮಂಗಲದಲ್ಲಿ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಕ್ಕಲಿಗ ಸಮಾಜಕ್ಕೆ ಆಘಾತ ತಂದಿದೆ.
ಮೊದಲ ಘಟನೆಯಲ್ಲಿ, ನೆಲಮಂಗಲ ತಾಲೂಕಿನ ನಿಂಬೇನಹಳ್ಳಿ ಗ್ರಾಮದ ಚನ್ನಗಿರಿಯಪ್ಪ ಮತ್ತು ಕೆಂಪಚನ್ನಮ್ಮ ದಂಪತಿಗಳ ಪುತ್ರ ಮಂಜುನಾಥ್ (44) ರೈಲ್ವೆ ಗೊಲ್ಲಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೃಹ ಬಳಕೆ ವಸ್ತುಗಳ ಡಿಸ್ಟ್ರಿಬ್ಯೂಟರ್ ಆಗಿದ್ದ ಮಂಜುನಾಥ್, ಹಲವು ವರ್ಷಗಳಿಂದ ಮದುವೆಯಾಗಲು ಪ್ರಯತ್ನಿಸಿದರೂ ಸಂಗಾತಿ ಸಿಗದೆ ನಿರಾಶೆಗೊಂಡಿದ್ದರು.
ಇದೇ ದಿನ, ಮೂರು ಗಂಟೆಗಳ ಒಳಗೆ ಮತ್ತೊಂದು ದುರಂತ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಅಲೂಗೊಂಡನಹಳ್ಳಿ ಗ್ರಾಮದ ಹನುಮಂತರಾಯಪ್ಪ ಮತ್ತು ವರಲಕ್ಷ್ಮಿ ದಂಪತಿಗಳ ಪುತ್ರ ಹನುಮಂತರಾಜು (41) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಂಗ್ ಫಿಷರ್ ಬಿಯರ್ ಕಂಪನಿಯಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅವರು, ಮದುವೆಗಾಗಿ ಹಲವು ಪ್ರಯತ್ನಗಳನ್ನು ಮಾಡಿದರೂ ಸಂಗಾತಿ ಸಿಗದ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ವಿವಾಹ ಸಲಹೆಗಾರರಿಗೆ(ಮ್ಯಾರೇಜ್ ಬ್ರೋಕರ್) ಹಣ ಪಾವತಿಸಿದರೂ ಸಂಬಂಧ ಜೋಡಿಸಲು ಸಾಧ್ಯವಾಗಿರಲಿಲ್ಲ. ಹೆಣ್ಣು ಕೇಳಲು ಹೋದಾಗ ವಿದ್ಯಾರ್ಹತೆ, ಉದ್ಯೋಗ, ಮತ್ತು ಸ್ವಂತ ಮನೆಯ ಬಗ್ಗೆ ಪ್ರಶ್ನೆಗಳು ಬಂದಿದ್ದವು. ವಯಸ್ಸು ಮೀರಿದಂತೆ, ಆಪ್ತರಿಂದ “ಮದುವೆ ಯಾವಾಗ?” ಎಂಬ ಪ್ರಶ್ನೆಗಳು ಮಾನಸಿಕ ಒತ್ತಡವನ್ನು ಉಂಟುಮಾಡಿದವು. ಈ ಸಾಮಾಜಿಕ ಒತ್ತಡ ಮತ್ತು ಮದುವೆಯಾಗದಿರುವ ಕಾರಣದಿಂದ ಮನನೊಂದು ಇಬ್ಬರೂ ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ. ಎರಡೂ ಪ್ರಕರಣಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ