ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆಯವರ ಮೊಬೈಲ್‌ನಲ್ಲಿ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ, ಇದರಲ್ಲಿ ಕರಾವಳಿಯ ಒಬ್ಬ ಪ್ರಮುಖ ರಾಜಕಾರಣಿಯ ವಿಡಿಯೋ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಯಿಂದ ಪೊಲೀಸರೇ ಬೆಚ್ಚಿಬಿದ್ದಿದ್ದು, ಮೂಡಬಿದಿರೆ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಸಮಿತ್ ರಾಜ್ ಧರೆಗುಡ್ಡೆಯವರನ್ನು ಖಾಸಗಿ ಬಸ್‌ಗೆ ಕಲ್ಲು ತೂರಿ ಹಾನಿ ಮಾಡಿದ ಪ್ರಕರಣದಲ್ಲಿ ಮೂಡಬಿದಿರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ತನಿಖೆಯ ಭಾಗವಾಗಿ ಅವರ ಮೊಬೈಲ್‌ನ್ನು ವಶಪಡಿಸಿಕೊಂಡಾಗ, ಕೋರ್ಟ್ ಮತ್ತು ಮೇಲಾಧಿಕಾರಿಗಳ ಅನುಮತಿಯೊಂದಿಗೆ ಡೇಟಾ ಎಕ್ಸ್‌ಟ್ರಾಕ್ಷನ್ ನಡೆಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳು ಪತ್ತೆಯಾಗಿದ್ದು, ಅದರಲ್ಲಿ ಕರಾವಳಿಯ ರಾಜಕಾರಣಿಯೊಬ್ಬರ ವಿಡಿಯೋ ಇರುವುದು ದೃಢಪಟ್ಟಿದೆ.
ಈ ಆಘಾತಕಾರಿ ಸಂಗತಿಯ ಬಗ್ಗೆ ಇನ್ಸ್‌ಪೆಕ್ಟರ್ ಸಂದೇಶ್ ದೂರು ದಾಖಲಿಸಿದ್ದಾರೆ. ವಿಡಿಯೋಗಳನ್ನು ಪ್ರಸಾರ ಮಾಡುವ, ಹಂಚಿಕೊಳ್ಳುವ, ಅಥವಾ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೂಡಬಿದಿರೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಈ ವಿಡಿಯೋಗಳ ಮೂಲವನ್ನು ಕಂಡುಹಿಡಿಯಲು ತನಿಖೆ ಆರಂಭಿಸಿದ್ದಾರೆ.
ಸಮಿತ್ ರಾಜ್ ಧರೆಗುಡ್ಡೆಯವರು ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ, ಈ ಹೊಸ ಆರೋಪದ ಕುರಿತು ವಿಚಾರಣೆಗಾಗಿ ಅವರಿಗೆ ನೋಟೀಸ್ ಜಾರಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.





