ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ನೂತನ ಸಂಪುಟದ ಮೊದಲ ಹಂತದ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಪ್ರಮುಖ ಹಣಕಾಸು ಇಲಾಖೆಯನ್ನು ಸಿಎಂ ಡಿಕೆ ಶಿವಕುಮಾರ್ ಅವರೇ ತಮ್ಮ ಬಳಿ ಉಳಿಸಿಕೊಂಡಿದ್ದು, ಇತರ ಸಚಿವರಿಗೆ ಮಹತ್ವದ ಖಾತೆಗಳನ್ನು ವಿತರಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರಿಗೆ ಹಿಂದಿನ ಖಾತೆಗಳನ್ನೇ ಮುಂದುವರಿಸಿ ನೀಡಲಾಗಿದೆ.
ಸಚಿವರು ಮತ್ತು ಅವರ ಖಾತೆಗಳ ಸಂಪೂರ್ಣ ಪಟ್ಟಿ
ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂ ನಡುವಿನ ಸುದೀರ್ಘ ಚರ್ಚೆಯ ಬಳಿಕ ಈ ಖಾತೆ ವಿತರಣೆ ಅಂತಿಮಗೊಂಡಿದೆ.
| ಕ್ರ.ಸಂ. | ಸಚಿವರ ಹೆಸರು | ಖಾತೆ |
|---|---|---|
| 1 | ಡಾ. ಜಿ. ಪರಮೇಶ್ವರ್ (ಡಿಸಿಎಂ) | ಕಂದಾಯ ಮತ್ತು ಯುವ ಸಬಲೀಕರಣ |
| 2 | ಪ್ರಿಯಾಂಕ್ ಖರ್ಗೆ | ಗೃಹ, ಐಟಿ & ಬಿಟಿ |
| 3 | ಕೆ.ಜೆ. ಜಾರ್ಜ್ | ಇಂಧನ ಮತ್ತು ಪ್ರವಾಸೋದ್ಯಮ |
| 4 | ಎಂ.ಬಿ. ಪಾಟೀಲ್ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
| 5 | ಸತೀಶ್ ಜಾರಕಿಹೊಳಿ | ಲೋಕೋಪಯೋಗಿ ಇಲಾಖೆ |
| 6 | ರಾಮಲಿಂಗಾರೆಡ್ಡಿ | ಜಲಸಂಪನ್ಮೂಲ |
| 7 | ಕೃಷ್ಣಬೈರೇಗೌಡ | ಬೆಂಗಳೂರು ನಗರಾಭಿವೃದ್ಧಿ |
| 8 | ಕೆ.ಹೆಚ್. ಮುನಿಯಪ್ಪ | ಆಹಾರ ಮತ್ತು ನಾಗರಿಕ ಸರಬರಾಜು |
| 9 | ಈಶ್ವರ್ ಖಂಡ್ರೆ | ಗ್ರಾಮೀಣಾಭಿವೃದ್ಧಿ |
| 10 | ಬೈರತಿ ಸುರೇಶ್ | ಸಾರಿಗೆ |
| 11 | ಯು.ಟಿ. ಖಾದರ್ | ಆರೋಗ್ಯ |
| 12 | ಡಾ. ಶರಣಪ್ರಕಾಶ್ ಪಾಟೀಲ್ | ವೈದ್ಯಕೀಯ ಶಿಕ್ಷಣ |
| 13 | ಯತೀಂದ್ರ ಸಿದ್ದರಾಮಯ್ಯ | ನಗರಾಭಿವೃದ್ಧಿ |
ಸಚಿವರಾದ ಕೆ.ಹೆಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಅದೇ ಖಾತೆಗಳನ್ನು ಮತ್ತೆ ನೀಡಲಾಗಿದೆ.
ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇದೊಂದು ಮಹತ್ವದ ತಿರುವು. ದಿವಂಗತ ಎಸ್.ಎಂ. ಕೃಷ್ಣ ಮತ್ತು ಧರಂ ಸಿಂಗ್ ಅವರ ಬಳಿಕ 20 ವರ್ಷಗಳ ಸುದೀರ್ಘ ಅವಧಿಯ ನಂತರ ಅಪ್ಪಟ ಮೂಲ ಕಾಂಗ್ರೆಸ್ ಸಿದ್ಧಾಂತದ ನಾಯಕ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬೇರೆ ಪಕ್ಷಗಳಿಂದ ವಲಸೆ ಬಂದ ನಾಯಕರಿಗೆ ಅತ್ಯಂತ ಕಡಿಮೆ ಸ್ಥಾನಗಳನ್ನು ನೀಡಲಾಗಿದೆ. ಸತೀಶ್ ಜಾರಕಿಹೊಳಿ ಮಾತ್ರ ವಲಸಿಗರ ಪೈಕಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಖಾತೆಯನ್ನು ನೀಡಲಾಗಿದೆ.
ಸಂಪುಟ ವಿಸ್ತರಣೆ ಮಾತ್ರವಲ್ಲದೆ ಪಕ್ಷದ ಸಂಘಟನಾ ಜವಾಬ್ದಾರಿಯಲ್ಲೂ ಮೂಲ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಪ್ರಾಮುಖ್ಯತೆ ನೀಡಿದೆ. ಕಟ್ಟರ್ ಕಾಂಗ್ರೆಸ್ ವಾದಿ ಮತ್ತು ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ನೂತನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಎರಡನೇ ಪಟ್ಟಿಯ ಮೇಲಿದೆ ಎಲ್ಲರ ಕಣ್ಣು
ಮೊದಲ ಹಂತದ ಸಂಪುಟ ವಿಸ್ತರಣೆ ಮುಗಿದಿದ್ದು, ಇನ್ನೂ ಸುಮಾರು 20 ಮಂದಿ ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕಾದ ಜವಾಬ್ದಾರಿ ಸಿಎಂ ಅವರ ಮೇಲಿದೆ. ಎರಡನೇ ಹಂತದ ಸಚಿವರ ಪಟ್ಟಿ ಮುಂದಿನ ದಿನಗಳಲ್ಲಿ ಅಂತಿಮಗೊಳ್ಳಲಿದೆ.





