ಕೊಪ್ಪಳ: “ನಾಳೆ ಇರ್ತಿನೋ ಇಲ್ಲೋ, ಏನ್ ಮಾಡ್ತಿನೋ ಗೊತ್ತಿಲ್ಲ” ಎಂದು ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಸೋಮವಾರ (ಸೆ.08) ನಡೆದಿದೆ.
ನಿನ್ನೆ (ಸೆ.07) ಮೂವರು ಸ್ನೇಹಿತರೊಂದಿಗೆ ಕೊಪ್ಪಳಕ್ಕೆ ಆಗಮಿಸಿದ್ದ ಲಕ್ಷ್ಮಯ್ಯ ಸ್ವಾಮೀಜಿ, ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೀಲ್ಸ್ ವಿಡಿಯೋ ಮಾಡಿದ್ದರು. ಇಂದು ಆನೆಗೊಂದಿ ಬಳಿಯ ತುಂಗಭದ್ರಾ ನದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ಮುಳುಗಿ ಚೀರಾಡುತ್ತಿದ್ದ ಸ್ವಾಮೀಜಿಯನ್ನು ಸ್ಥಳೀಯರು ರಕ್ಷಿಸಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ, ವೈದ್ಯರ ಕೊರತೆಯಿಂದಾಗಿ ಗಂಗಾವತಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮಾರ್ಗದಲ್ಲೇ ಲಕ್ಷ್ಮಯ್ಯ ಸಾವನಪ್ಪಿದ್ದಾರೆ.
ಗೆಳೆಯರ ಮನೆಗೆ ಭೇಟಿ ನೀಡಲು ಬಂದಿದ್ವಿ ಎಂದು ಸ್ವಾಮೀಜಿಯ ಸ್ನೇಹಿತರು ತಿಳಿಸಿದ್ದಾರೆ. ಆದರೆ, ಕೆಲವರು ಲಕ್ಷ್ಮಯ್ಯ ದೆವ್ವ ಬಿಡಿಸಲು ಆನೆಗೊಂದಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.