ಕೋಲಾರ: ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ದುಡ್ಡಿನ ಆಸೆಗೆ ಬೆಟ್ಟಿಂಗ್ ಕಟ್ಟಿ ನೀರು ಬೆರಸದೆ ಐದು ಬಾಟಲ್ ಮದ್ಯ ಸೇವಿಸಿದ ಯುವಕನೊಬ್ಬ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ಕಾರ್ತಿಕ್ (21) ಎಂಬ ಯುವಕನೇ ಈ ದುರಂತಕ್ಕೆ ಬಲಿಯಾಗಿದ್ದಾನೆ.
ಕಾರ್ತಿಕ್, ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರೊಂದಿಗೆ ಒಟ್ಟಿಗೆ ಮದ್ಯ ಸೇವನೆಗೆ ಸಂಬಂಧಿಸಿದ ಬೆಟ್ಟಿಂಗ್‌ನಲ್ಲಿ ಭಾಗವಹಿಸಿದ್ದ. ವೆಂಕಟರೆಡ್ಡಿ, ಕಾರ್ತಿಕ್‌ಗೆ ಐದು ಬಾಟಲ್ ಮದ್ಯವನ್ನು ನೀರು ಬೆರಸದೆ ಕುಡಿದರೆ 10,000 ರೂಪಾಯಿ ನೀಡುವುದಾಗಿ ಬಾಜಿ ಕಟ್ಟಿದ್ದ. ಈ ಸವಾಲನ್ನು ಸ್ವೀಕರಿಸಿದ ಕಾರ್ತಿಕ್, ಎಲ್ಲ ಐದು ಬಾಟಲ್ ಮದ್ಯವನ್ನು ಸೇವಿಸಿದನು. ಆದರೆ, ತಕ್ಷಣವೇ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದನು.
ಕೂಡಲೇ ಕಾರ್ತಿಕ್‌ನನ್ನು ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವನು ಮೃತಪಟ್ಟನು. ಈ ಘಟನೆ ಕಾರ್ತಿಕ್‌ನ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕಾರ್ತಿಕ್‌ಗೆ ಮದುವೆಯಾಗಿ ಕೇವಲ ಒಂದು ವರ್ಷವಾಗಿತ್ತು, ಮತ್ತು ಕಳೆದ ಎಂಟು ದಿನಗಳ ಹಿಂದಷ್ಟೇ ಅವನ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು. ಈಗ ಆ ತಾಯಿ ಮತ್ತು ಮಗು ಅನಾಥರಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವೆಂಕಟರೆಡ್ಡಿ, ಸುಬ್ರಮಣಿ ಸೇರಿದಂತೆ ಆರು ಮಂದಿಯ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟರೆಡ್ಡಿ ಮತ್ತು ಸುಬ್ರಮಣಿಯನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.