ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಧಿಕಾರಿ ಕಚೇರಿ ಮತ್ತು ಬೀದರ್ DC ಕಚೇರಿಗೆ ಒಂದೇ ಸಮಯದಲ್ಲಿ ಅನಾಮಧೇಯ ಇಮೇಲ್ ಬಂದಿತ್ತು. “ನಿಮ್ಮ ಕಚೇರಿಯಲ್ಲಿ RDX ಬಾಂಬ್ ಇದೆ, ಸ್ಫೋಟಗೊಳ್ಳಲಿದೆ” ಎಂದು ಇಮೇಲ್ ಬಂದಿದ್ದು.
ಈ ಒಂದು ಮೇಲ್ ಸಾಕಾಗಿತ್ತು ಎಂಟೈರ್ ಜಿಲ್ಲಾಡಳಿತವನ್ನು ತಲ್ಲಣ ಮಾಡಲು. ಬಾಂಬ್ ಸ್ಕ್ವಾಡ್, ಶ್ವಾನದಳ, ಅಗ್ನಿಶಾಮಕ ದಳ, ಡಾಗ್ ಸ್ಕ್ವಾಡ್ ಎಲ್ಲವೂ ಒಟ್ಟಿಗೆ ಧಾವಿಸಿದ್ದವು. ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮತ್ತು SP ನಿಖಿಲ್ ಅವರೇ ಸ್ಥಳಕ್ಕೆ ಬಂದು ಮೇಲ್ವಿಚಾರಣೆ ನಡೆಸಿದರು. ಸಿಬ್ಬಂದಿಯನ್ನು ಸಂಪೂರ್ಣವಾಗಿ ಹೊರಗೆ ಕಳುಹಿಸಿ, ಇಂಚಿಂಚೂ ತಪಾಸಣೆ ನಡೆಸಲಾಯಿತು. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು VC ಚೇಂಬರ್‌ನಲ್ಲಿ ಸಭೆ ನಡೆಸುತ್ತಿದ್ದ ಸಮಯದಲ್ಲೇ ಈ ಗೊಂದಲ ಸೃಷ್ಟಿಯಾಗಿತ್ತು. ಆತಂಕದ ವಾತಾವರಣದಲ್ಲಿ ಎಲ್ಲರೂ ಹೊರಬಂದರು.
ಕೆಲವೇ ಗಂಟೆಗಳಲ್ಲಿ ಪೊಲೀಸರ ತ್ವರಿತ ತನಿಖೆಯಿಂದ ಬೆದರಿಕೆಯ ಹಿಂದಿನ ಸತ್ಯ ಬಯಲಾಯಿತು ಮತ್ತು ಆ ಸತ್ಯ ಕೇಳಿ ಎಲ್ಲ ಅಧಿಕಾರಿಗಳೂ ಶಾಕ್.
ಬಾಂಬ್ ಬೆದರಿಕೆ ಕಳಿಸಿದ್ದು 13 ವರ್ಷದ ಬಾಲಕಿ. ತಮಿಳುನಾಡಿನ ಮೈಲಾಪುರ ಪ್ರದೇಶದ 13 ವರ್ಷದ ಬಾಲಕಿಯೊಬ್ಬಳೇ ಈ ಇಮೇಲ್ ಕಳುಹಿಸಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಆಕೆಯ ಉದ್ದೇಶ ಏನೆಂದರೆ ತನಗೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಸಮಾಜದ ಗಮನ ಸೆಳೆಯುವುದು.
ಇಮೇಲ್‌ನಲ್ಲಿ ಮೊದಲು “RDX ಬಾಂಬ್ ಇದೆ” ಎಂದು ಬರೆದು, ನಂತರ ತನ್ನ ಮೇಲೆ ನಡೆದಿರುವ ಅತ್ಯಾಚಾರ ಮತ್ತು ದೌರ್ಜನ್ಯದ ಬಗ್ಗೆ ವಿವರವಾಗಿ ಬರೆದಿದ್ದಾಳೆ. “ಯಾರೂ ನನ್ನ ಮಾತು ಕೇಳುತ್ತಿಲ್ಲ, ನನ್ನ ದನಿ ಕೇಳಿಸಿಕೊಳ್ಳಲು ಇದೇ ದಾರಿ ಉಳಿದಿದೆ” ಎಂಬ ರೀತಿಯಲ್ಲಿ ಆಕೆ ಬರೆದಿದ್ದಾಳೆ ಎನ್ನಲಾಗಿದೆ.
ಪೊಲೀಸರು ತಕ್ಷಣ ತಮಿಳುನಾಡು ಪೊಲೀಸರ ಸಂಪರ್ಕಕ್ಕೆ ಹೋಗಿ ಬಾಲಕಿಯನ್ನು ಪತ್ತೆಹಚ್ಚಿ, ಆಕೆಯನ್ನು ಸುರಕ್ಷಿತವಾಗಿ ಕೌನ್ಸೆಲಿಂಗ್‌ಗೆ ಒಳಪಡಿಸಿದ್ದಾರೆ. ಬಾಲಕಿಯ ಕುಟುಂಬದೊಂದಿಗೆ ಮಾತನಾಡಿ, ಆಕೆಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಕೋಲಾರ SP ನಿಖಿಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದು: “ಇದು ನಿಜವಾದ ಬಾಂಬ್ ಬೆದರಿಕೆ ಅಲ್ಲ. ದೃಢವಾಗಿ ತನಿಖೆ ನಡೆಸಿದ್ದೇವೆ. ಆದರೆ ಈ ಬಾಲಕಿಯ ದನಿ ಕೇಳಿಸಿಕೊಳ್ಳಲು ಆಕೆ ಈ ರೀತಿ ಮಾಡಿದ್ದಾಳೆ ಎಂಬುದು ತುಂಬಾ ದುಃಖದ ಸಂಗತಿ. ಆಕೆಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು.”
ಒಟ್ಟಾರೆಯಲ್ಲಿ, ಬಾಂಬ್ ಎಂಬ ಆತಂಕ ಕೆಲವೇ ಗಂಟೆಗಳಲ್ಲಿ ತಣ್ಣಗಾಯಿತು. ಆದರೆ ಒಂದು 13 ವರ್ಷದ ಬಾಲಕಿಯ ದನಿ ಕೇಳಿಸಿಕೊಳ್ಳಲು ಆಕೆಗೆ ಇಂತಹ ಅತಿ ಧಾರುಣ ಹೆಜ್ಜೆ ಇಡಬೇಕಾಯಿತು ಎಂಬುದು ಸಮಾಜಕ್ಕೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.





