ಬೆಂಗಳೂರು, (ಜುಲೈ 16): ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. 14ನೇ ಡ್ರೈವರ್‌ಲೆಸ್ ಮೆಟ್ರೋ ರೈಲು ಬೆಂಗಳೂರಿಗೆ ತಲುಪಿದ್ದು, ಹೆಬ್ಬಗೋಡಿ ಡಿಪೋದಲ್ಲಿ ಸೇರ್ಪಡೆಯಾಗಿದೆ. ಆರ್.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮಾರ್ಗಕ್ಕಾಗಿ ಒಟ್ಟು 15 ಡ್ರೈವರ್‌ಲೆಸ್ ರೈಲುಗಳಿಗೆ ಈಗಾಗಲೇ ಆರ್ಡರ್ ನೀಡಲಾಗಿದ್ದು, ಉಳಿದ ರೈಲುಗಳೂ ಹಂತ ಹಂತವಾಗಿ ಆಗಮಿಸಲಿವೆ.
- ಬೆಂಗಳೂರಿಗೆ 14ನೇ ಡ್ರೈವರ್‌ಲೆಸ್ ಮೆಟ್ರೋ ರೈಲು ಆಗಮನ.
- ಹೆಬ್ಬಗೋಡಿ ಡಿಪೋಗೆ ತಲುಪಿದ ರೈಲು.
- ಹಳದಿ ಮಾರ್ಗಕ್ಕೆ ಒಟ್ಟು 15 ಡ್ರೈವರ್‌ಲೆಸ್ ರೈಲುಗಳಿಗೆ ಆರ್ಡರ್.
- ಪ್ರಸ್ತುತ 10 ರೈಲುಗಳು ವಾಣಿಜ್ಯ ಸಂಚಾರದಲ್ಲಿವೆ
- ಪೀಕ್ ಅವರ್‌ನಲ್ಲಿ 7 ನಿಮಿಷಕ್ಕೊಮ್ಮೆ ರೈಲು ಸೇವೆ
19.15 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳು ಇದ್ದು, ಇದು ಬೆಂಗಳೂರಿನ ಪ್ರಮುಖ ಐಟಿ ವಲಯಗಳಾದ ಸಿಲ್ಕ್ ಬೋರ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳನ್ನು ಸೇವೆಗೆ ಸೇರಿಸಲಾಗುತ್ತಿದೆ.
ಪ್ರಸ್ತುತ ಈ ಮಾರ್ಗದಲ್ಲಿ 10 ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸುತ್ತಿವೆ. ಪೀಕ್ ಅವರ್‌ನಲ್ಲಿ ಸುಮಾರು 7 ನಿಮಿಷಕ್ಕೊಮ್ಮೆ ಹಾಗೂ ನಾನ್-ಪೀಕ್ ಅವರ್‌ನಲ್ಲಿ 10 ನಿಮಿಷಕ್ಕೊಮ್ಮೆ ರೈಲು ಸಂಚಾರ ನಡೆಯುತ್ತಿದೆ. ಉಳಿದ ರೈಲುಗಳು ವಾಣಿಜ್ಯ ಸೇವೆಗೆ ಸೇರ್ಪಡೆಯಾದ ಬಳಿಕ ಈ ಅಂತರ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಬಿಎಮ್‌ಆರ್‌ಸಿಎಲ್ ಈಗಾಗಲೇ 11 ಮತ್ತು 12ನೇ ರೈಲುಗಳನ್ನು ಸೇವೆಗೆ ಸೇರಿಸುವ ಸಿದ್ಧತೆಯಲ್ಲಿದ್ದು, ಅವುಗಳ ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರಯಾಣಿಕರ ಕಾಯುವಿಕೆ ಸಮಯ ಕಡಿಮೆಯಾಗುವ ಜೊತೆಗೆ ದಟ್ಟಣೆಯೂ ಇಳಿಕೆಯಾಗಲಿದೆ. ಒಟ್ಟು 15 ರೈಲುಗಳು ಸೇವೆಗೆ ಬಂದ ಬಳಿಕ ಹಳದಿ ಮಾರ್ಗದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ಸಂಚಾರ ಸುಗಮಗೊಳಿಸುವಲ್ಲಿ ಹಳದಿ ಮಾರ್ಗ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮಾರ್ಗವನ್ನು 2025ರ ಆಗಸ್ಟ್ 10ರಂದು ಉದ್ಘಾಟಿಸಲಾಗಿದ್ದು, ಆಗಸ್ಟ್ 11ರಿಂದ ವಾಣಿಜ್ಯ ಸಂಚಾರ ಆರಂಭವಾಗಿತ್ತು.
ಹೆಚ್ಚುವರಿ ಡ್ರೈವರ್‌ಲೆಸ್ ರೈಲುಗಳ ಸೇರ್ಪಡೆಯಿಂದ ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಹಾಗೂ ಆರಾಮದಾಯಕ ಮೆಟ್ರೋ ಸೇವೆ ದೊರೆಯಲಿದ್ದು, ದೈನಂದಿನ ಸಂಚಾರ ಮತ್ತಷ್ಟು ಸುಲಭವಾಗುವ ನಿರೀಕ್ಷೆ ಇದೆ.
ಬೆಂಗಳೂರಿನ ಜನರ ಬ್ಯುಸಿ ಜೀವನಕ್ಕೆ ಮತ್ತು ಬೆಂಗಳೂರು ನಗರದಂತಹ ಸಂಚಾರ ದಟ್ಟಣೆ ಇರುವ ಪ್ರದೇಶಕ್ಕೆ ನಮ್ಮ ಮೆಟ್ರೋದಂತಹ ರೈಲು ಸೇವೆಗಳು ಬಹಳ ಪ್ರಯೋಜನಕಾರಿಯಾಗಿದೆ. ಈ ನಮ್ಮ ಮೆಟ್ರೋ ಸೇವೆಯಿಂದ ಸಂಚಾರದಟ್ಟಣೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು.





