ಕಲಬುರಗಿ: ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರರು, ಮಾಲೀಕನಿಗೆ ಗನ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ 2.5 ರಿಂದ 3 ಕೆಜಿ ಚಿನ್ನಾಭರಣಗಳನ್ನು ದೋಚಿರುವ ಘಟನೆ ಮಧ್ಯಾಹ್ನ 12:30ರ ಸುಮಾರಿಗೆ ನಡೆದಿದೆ.
ನಾಲ್ವರು ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಪ್ರವೇಶಿಸಿದ್ದರು. ಬಳಿಕ, ಅಂಗಡಿಯ ಮಾಲೀಕ ಸಬಕಾ ಮಾಲೀಕ್‌ರಿಗೆ ಗನ್ ಮತ್ತು ಇತರ ಮಾರಕಾಸ್ತ್ರಗಳನ್ನು ತೋರಿಸಿ, ಆತನ ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಸೆಲ್ಲೋ ಟೇಪ್ ಸುತ್ತಿ, 2.5 ಕೆಜಿಗಿಂತಲೂ ಹೆಚ್ಚು ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಘಟನೆಯ ನಂತರ, ಸಬಕಾ ಮಾಲೀಕ್ ಶಟ್ಟರ್‌ಗೆ ಕಾಲಿನಿಂದ ಬಡಿದು ಗಮನ ಸೆಳೆದಿದ್ದಾರೆ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಅಂಗಡಿಯವರು ಧಾವಿಸಿ ಆತನನ್ನು ರಕ್ಷಿಸಿದ್ದಾರೆ.
ಈ ಘಟನೆ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿ ಮಾಲೀಕ ಸಬಕಾ ಮಾಲೀಕ್, ಈ ಹಿಂದೆ ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿದ್ದ ಕೆಲವರು ಈ ದರೋಡೆಯಲ್ಲಿ ಭಾಗಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ಐದು ತಂಡಗಳನ್ನು ರಚಿಸಿ, ದರೋಡೆಕೋರರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ದರೋಡೆ ಘಟನೆಯು ಕಲಬುರಗಿಯ ಸರಾಫ್ ಬಜಾರ್‌ನಲ್ಲಿ ಆತಂಕ ಮೂಡಿಸಿದೆ. ಹಾಡಹಗಲೇ ಇಂತಹ ದಿಟ್ಟ ದರೋಡೆ ನಡೆದಿರುವುದು ಸ್ಥಳೀಯ ವ್ಯಾಪಾರಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.





