ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭವೊಂದು ಒಂದೇ ಕ್ಷಣದಲ್ಲಿ ದುರಂತವಾಗಿ ಪರಿವರ್ತನೆಯಾಯಿತು. ತಾಳಿ ಕಟ್ಟಿ ಕೇವಲ 20 ನಿಮಿಷಗಳಾಗುವಷ್ಟರಲ್ಲಿ ವರ ಪ್ರವೀಣನಿಗೆ ಹೃದಯಾಘಾತವಾಗಿ, ವೇದಿಕೆಯಲ್ಲಿಯೇ ಕುಸಿದು ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಎರಡೂ ಕುಟುಂಬಗಳ ಸಂಭ್ರಮವು ಶೋಕದ ವಾತಾವರಣವಾಗಿ ಬದಲಾಯಿತು.
ಪ್ರವೀಣ ಹಲವಾರು ಕನಸುಗಳೊಂದಿಗೆ ಮದುವೆ ಮಂಟಪವೇರಿದ್ದ. ಮದುಮಗಳನ್ನು ಕಂಡು ಖುಷಿಯಿಂದ ತಾಳಿ ಕಟ್ಟಿದ್ದ ಅವನಿಗೆ, ಇತರ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಆತ ವೇದಿಕೆಯ ಮೇಲೆ ಕುಸಿದು ಬಿದ್ದ. ಆತನ ಆರೋಗ್ಯದಲ್ಲಿ ಏನೋ ತೊಂದರೆಯಾಗಿರಬಹುದೆಂದು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆತನನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ಆಸ್ಪತ್ರೆಗೆ ಕರೆದೊಯ್ಯಲಾದ ಪ್ರವೀಣನನ್ನು ಪರೀಕ್ಷಿಸಿದ ವೈದ್ಯರು, ಆತ ಈಗಾಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು. ಹೃದಯಾಘಾತವೇ ಆತನ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಈ ಸುದ್ದಿಯು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿತು. ಎರಡೂ ಕುಟುಂಬಗಳ ಆಕ್ರಂದನವು ಕಲ್ಯಾಣ ಮಂಟಪದಲ್ಲಿ ಮುಗಿಲು ಮುಟ್ಟಿತು.
ಮದುವೆಯ ಸಂಭ್ರಮದಿಂದ ಮದುಮಗಳನ್ನು ಮನೆಗೆ ಕರೆದೊಯ್ಯುವ ಕನಸಿನಲ್ಲಿದ್ದ ಪ್ರವೀಣನ ಕುಟುಂಬಕ್ಕೆ ಈ ಘಟನೆಯು ಸಿಡಿಲಿನಂತೆ ಬಡಿಯಿತು. ಕೇವಲ 20 ನಿಮಿಷಗಳ ಹಿಂದೆಯಷ್ಟೇ ಮುತ್ತೈದೆಯಾಗಿದ್ದ ವಧುವಿನ ಭವಿಷ್ಯದ ಬಗ್ಗೆಯೂ ಕುಟುಂಬಸ್ಥರು ಮರುಕಪಟ್ಟರು. ಈ ದುರಂತವು ಆಪ್ತರಿಗೆ ಮತ್ತು ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ.





