ಚಿನ್ನದ ಮೊಟ್ಟೆ ಇಡುವ ಕೋಳಿ ಅಂದ್ರೆ ಅದು ರಿಯಲ್ ಎಸ್ಟೇಟ್ ದಂಧೆ, ಹಣದ ರುಚಿಗೆ ಬಿದ್ದಿರೋ ರೌಡಿಶೀಟರ್ ಗಳು ಈ ದಂಧೆಯಲ್ಲಿ ತಮ್ಮದೇ ಪಟಾಲಂ ಕಟ್ಟಿಕೊಂಡು ದಬ್ಬಾಳಿಕೆ ಧಮ್ಕಿ, ಹಲ್ಲೆ ಮಾಡುತ್ತಾ ಲ್ಯಾಂಡ್ ಮಾಫಿಯಾ ಕಂಟ್ರೋಲ್ ಇಟ್ಟುಕೊಳ್ತಾ ಇದ್ದಾರೆ. ಇದೇ ರೀತಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಚಿವರ ಆಪ್ತ ಎನ್ನಿಸಿಕೊಂಡಿರುವ ರೌಡಿಶೀಟರ್ ಓರ್ವ, ನೂರಾರು ಜನರಿಗೆ ಕೆಲಸ, ಅನ್ನ ನೀಡಿದ್ದ ಪ್ರತಿಷ್ಠಿತ ಕುಟುಂಬಕ್ಕೆ ಜೀವ ಬೆದರಿಕೆ ಧಮ್ಕಿ ಹಾಕಿ ಪೊಲೀಸರಿಗೆ ಚಾಲೆಂಜ್ ಮಾಡಿದ ಘಟನೆ ನಡೆದಿದೆ.
ಯಾರ್ ಬರ್ತಾರೋ ಬರ್ಲಿ, ಅದ್ಯಾರು ಕೇಸ್ ತಗೋಳ್ತಾರೋ ತೆಗೊಳ್ಳಿ, ನೋಡಿಕೊಳ್ತೇನೆ, ಬಿಡೋದಿಲ್ಲ, ಸಾಹುಕಾರ್ ಗೆ ಹೇಳ್ತಿನಿ, ಏನೂ ಮಾಡಿಕೊಳ್ಳೋಕು ಆಗಲ್ಲ.. ಹೀಗೆ ರೌಡಿಶೀಟರ್ ಬೆದರಿಕೆ ಹಾಕಿದ್ದಾನೆ. ಈ ರೌಡಿಶೀಟರ್ ನ ಮಾತು ಕೇಳಿದ್ರೆ ಸಾಮಾನ್ಯ ಜನ ಬದುಕೋದು ಹೇಗಪ್ಪ ಎಂಬ ಪ್ರಶ್ನೆ ಮೂಡುತ್ತದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ರೌಡಿಶೀಟರ್ ಗಳ ಹಾವಳಿ ಮಿತಿ ಮೀರಿದೆ, ಹೆದರಿಸುವುದು, ಧಮ್ಕಿ, ಕೊಲೆ ಬೆದರಿಕೆ, ಕೊಲೆ, ಹಲ್ಲೆ ಮಾಡುತ್ತಾ ಜನರಲ್ಲಿ ಭಯ ಹುಟ್ಟಿಸಿ ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡೋದು ರೌಡಿಗಳ ಫ್ಯಾಶನ್ ಆಗ್ಬಿಟ್ಟಿದೆ. ಅದರಂತೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ರಿಯಲ್ ಎಸ್ಟೇಟ್ ಜೋರಾಗಿಯೇ ನಡೀತಾ ಇದೆ. ಇದಕ್ಕೆ ರೌಡಿಶೀಟರ್ ಗಳು, ಪುಡಿ ರೌಡಿಗಳ ಹಾವಳಿ ಎಲ್ಲೆ ಮೀರಿದೆ. ಹೀಗೆ ಪ್ರತಿಷ್ಠಿತ ಕುಟುಂಬದ ಓರ್ವ ಮಹಿಳೆಗೆ ಆಸ್ತಿ ಕಬ್ಜ ಮಾಡಲು ಆವಾಜ್, ಬೆದರಿಕೆ ಹಾಕಿರೋದು ಹಲವು ಕುಕೃತ್ಯಗಳಲ್ಲಿ ಭಾಗಿಯಾಗಿರುವ ಸಂತೋಷ್ ಕುಮಾರ್, ಅಲಿಯಾಸ್ ಕಣುಮ, ಎಂಬ ರೌಡಿಶೀಟರ್.. ಈ ರೌಡಿಶೀಟರ್ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಪ್ತ ಎಂದೇ ಹೇಳಲಾಗುತ್ತಿದ್ದು, ರೌಡಿ ಪಟಾಲಂ ಕಟ್ಟಿಕೊಂಡು ಬೆದರಿಸಿ ಹಣ ಗಳಿಸೋದು ಇವನ ಕೆಲಸವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ದಾವಣಗೆರೆ ಜವಳಿ ಉದ್ಯಮ ಬೆಳೆಸಿದವರಲ್ಲಿ ಪ್ರಮುಖರಲ್ಲಿ ಗುಂಡಿ ಮಹಾದೇವಪ್ಪ ಒಬ್ಬರಾಗಿದ್ದರು. ದಿವಂಗತ ಗುಂಡಿ ಮಹಾದೇವಪ್ಪ ಅಂದ್ರೆ ದಾವಣಗೆರೆಯಲ್ಲಿ ದೊಡ್ಡ ಮಟ್ಟದ ಹೆಸರು, ಸಮಾಜಮುಖಿ ಕೆಲಸ ಮಾಡುತ್ತಾ ಕೈಗಾರಿಕೆ ಸ್ಥಾಪನೆ ಮಾಡಿ ಆಗಿನ ಜನರಿಗೆ ಕೆಲಸ ನೀಡಿದವರು. ದಾವಣಗೆರೆಯಲ್ಲಿ ಸಿದ್ದೇಶ್ವರ ಖಾಟನ್ ಮಿಲ್ ಸ್ಥಾಪನೆಯಾಗಿ ಕುಟುಂಬದೊಳಗಿನ ಜಗಳದಿಂದ ಕಾರಣಾಂತರಗಳಿಂದ ಮುಚ್ಚಿದ್ದು, ಈ ಒಂದು ಜಾಗದ ವ್ಯಾಜ್ಯ ಸದ್ಯ ಉಚ್ಚ ನ್ಯಾಯಾಲಯದಲ್ಲಿದೆ. ಆದರೆ ಈ ಜಾಗವನ್ನ ಗುಂಡಿ ಕುಟುಂಬದ ಓರ್ವರು ಶಶಿ ಸೋಪ್ ಇಂಡಸ್ಟ್ರಿ ಮಾಲೀಕ ರವಿ ಇಳಂಗನ್ ಅವರಿಗೆ ಖರೀದಿ ನೀಡಿದ್ದಾರೆ ಎನ್ನಲಾಗಿದೆ. ಕೋರ್ಟ್ ನಲ್ಲಿರುವ ಪ್ರಾಪರ್ಟಿ ಖರೀದಿ ಆಗೋದಿಲ್ಲ, ಆದರೆ ರವಿ ಅವರ ಬೆಂಬಲಕ್ಕೆ ನಿಂತ ರೌಡಿಶೀಟರ್ ಕಣ್ವ, ಜೆಸಿಬಿ ಮೂಲಕ ಸುಮಾರು ಎರಡುವರೆ ಎಕರೆ ಜಾಗವನ್ನ ಕಬ್ಜ್ ಮಾಡಲು ಹೊರಟಿದ್ದಾನೆ. ಮಣ್ಣು ಏರಿಸಿ ಲೇಔಟ್ ಮಾಡಲು ಹೊರಟಿದ್ದಾರೆ. ಕೇಳಿದ್ರೆ ಕೊಲೆ ಬೆದರಿಕೆ ಹಾಕ್ತಾರೆ, ನಂದು ಯಾವ ಪೊಲೀಸ್ ಕೇಸ್ ತಗೊಳ್ತಾರೆ ನೋಡೋಣ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಗುಂಡಿ ಮಹಾದೇವಪ್ಪ ಕುಟುಂಬದ ಸೊಸೆ ಪುಷ್ಪಾ ಗಂಭೀರ ಆರೋಪ ಮಾಡಿದ್ದಾರೆ.
ಒಟ್ಟಾರೆ ನೂರಾರು ಜನರಿಗೆ ಕೆಲಸ ನೀಡಿದ್ದ ಈ ಜಾಗ ಕೋಟಿ ಕೋಟಿ ಬೆಲೆ ಬಾಳುತ್ತದೆ. ಸದ್ಯ ಜಾಗದ ವ್ಯಾಜ್ಯ ಕೋರ್ಟ್ ನಲ್ಲಿದ್ದರು ಸಹ ರೌಡಿಶೀಟರ್ ಮೂಲಕ ಕಬ್ಜ ಮಾಡಲು ಹೊರಟಿದ್ದಕ್ಕೆ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು, ಈ ಬಗ್ಗೆ ರವಿ ಇಳಂಗನ್, ರೌಡಿಶೀಟರ್ ಸಂತೋಷ್ ಕಣ್ವ ಮೇಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.