ಮಂಗಳೂರು (ಜುಲೈ 15): ರಾಜ್ಯದಲ್ಲಿ ಬಹಳ ಚರ್ಚೆಗೆ ಕಾರಣವಾದ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸುಮಾರು 7,000 ಪುಟಗಳ ಸಮಗ್ರ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
- ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ SIT 7,000 ಪುಟಗಳ ವರದಿ ಸಲ್ಲಿಕೆ
- ಒಂದು ವರ್ಷದ ತನಿಖೆಯ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
- ದಾಖಲೆಗಳು, ಸಾಕ್ಷ್ಯಗಳು ಹಾಗೂ ಸಾಕ್ಷಿದಾರರ ಹೇಳಿಕೆ ವರದಿಯಲ್ಲಿ ಸೇರಿಕೆ
- ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಸಮ್ಮುಖದಲ್ಲೇ ವರದಿ ಸಲ್ಲಿಕೆ
ಒಂದು ವರ್ಷಕ್ಕೂ ಹೆಚ್ಚು ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಎಸ್‌ಐಟಿ, ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈಜ್ಞಾನಿಕ ಪರೀಕ್ಷೆಗಳ ವಿವರಗಳನ್ನು ಒಳಗೊಂಡ ವರದಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಿದೆ.
ಈ ಪ್ರಕರಣದ ಗಂಭೀರತೆ ಹಾಗೂ ಸಾರ್ವಜನಿಕರ ಕುತೂಹಲವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯದಲ್ಲಿ ವರದಿ ಸಲ್ಲಿಸುವ ವೇಳೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಈ ವೇಳೆ ಪ್ರಕರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದು, ಅವರ ಸಮ್ಮುಖದಲ್ಲೇ ಎಸ್‌ಐಟಿ ಅಧಿಕಾರಿಗಳು ವರದಿಯನ್ನು ಸಲ್ಲಿಸಿದರು.
ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಸುಮಾರು ಒಂದು ವರ್ಷದ ಹಿಂದೆ ಎಸ್‌ಐಟಿ ರಚಿಸಿತ್ತು. ತನಿಖೆಯ ಅವಧಿಯಲ್ಲಿ ಹಲವು ಸಾಕ್ಷಿದಾರರ ವಿಚಾರಣೆ, ದಾಖಲೆಗಳ ಪರಿಶೀಲನೆ ಮತ್ತು ತಾಂತ್ರಿಕ ಸಾಕ್ಷ್ಯಗಳ ವಿಶ್ಲೇಷಣೆ ನಡೆಸಿದ ಬಳಿಕ ಅಂತಿಮ ವರದಿ ಸಿದ್ಧಪಡಿಸಲಾಗಿದೆ.
ನ್ಯಾಯಾಲಯ ಇದೀಗ ಎಸ್‌ಐಟಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಮುಂದಿನ ಕಾನೂನು ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ. ವರದಿಯಲ್ಲಿರುವ ಮಾಹಿತಿಯ ಆಧಾರದ ಮೇಲೆ ಮುಂದಿನ ವಿಚಾರಣೆ, ಆರೋಪಪಟ್ಟಿ ಅಥವಾ ಇತರೆ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ಧರ್ಮಸ್ಥಳದ ಸುತ್ತಮುತ್ತಲಿನ ಅನೇಕ ಕಾಡುಗಳಲ್ಲಿ ಅನೇಕ ಮೃತದೇಹಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಈ ಬುರುಡೆ ರಹಸ್ಯವನ್ನು ಪತ್ತೆ ಮಾಡಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಧರ್ಮಸ್ಥಳ ಬುರುಡೆ ಪ್ರಕರಣವು ಆರಂಭದಿಂದಲೂ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಎಸ್‌ಐಟಿ ವರದಿ ಸಲ್ಲಿಕೆಯಿಂದ ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ. ಈ ವರದಿಯಿಂದ ಯಾವುದೆಲ್ಲಾ ಅಂಶ ಬೆಳಕಿಗೆ ಬರಲಿದೆ ಎಂದು ಕಾದು ನೋಡಬೇಕಿದೆ. ಈ ಎಸ್‌ಐಟಿ ವರದಿಯಿಂದ ಧರ್ಮಸ್ಥಳ ಬುರುಡೆ ಪ್ರಕರಣ ಒಂದು ನಿರ್ಧಿಷ್ಟ ಹಂತ ತಲುಪುತ್ತಾ ಎಂಬುವುದೇ ಈಗ ಇರುವ ದೊಡ್ಡ ಕುತೂಹಲಕರ ವಿಷಯವಾಗಿದೆ.





