ನವದೆಹಲಿ (ಜುಲೈ 15): ಕಾರ್ಗಿಲ್ ಯುದ್ಧದ ಗೆಲುವಿನ ಸಂಭ್ರಮವನ್ನು ದೇಶಾದ್ಯಂತ ಆಚರಿಸುವ ಸಲುವಾಗಿ ಆಯೋಜಿಸಲಾಗಿರುವ ‘ಶೌರ್ಯ ವಿಜಯ್ ಯಾತ್ರೆ’ ಬೈಕ್ Rallyಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೊಸದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹಸಿರು ನಿಶಾನೆ ತೋರಿದರು.
‘ಒಂದು ಸವಾರಿ, ಒಂದು ರಾಷ್ಟ್ರ, ಒಂದು ಸೆಲ್ಯೂಟ್’ ಎಂಬ ಧ್ಯೇಯವಾಕ್ಯದೊಂದಿಗೆ ಜಾವಾ ಮತ್ತು ಯೆಜ್ಡಿ ಮೋಟಾರ್‌ಸೈಕಲ್‌ಗಳು ಈ ಸಾಹಸಮಯ ಯಾನವನ್ನು ಆರಂಭಿಸಿವೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾದ ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡ ಒಟ್ಟು 28 ಸವಾರರು ಈ Rallyಯಲ್ಲಿ ಪಾಲ್ಗೊಂಡಿದ್ದಾರೆ.
ಬರೋಬ್ಬರಿ 13 ದಿನಗಳ ಕಾಲ 1,900 ಕಿಲೋಮೀಟರ್‌ಗಳ ಸುದೀರ್ಘ ಹಾಗೂ ಕಠಿಣ ಹಾದಿಯಲ್ಲಿ ಸಾಗಲಿರುವ ಈ ಬೈಕ್ Rally, ಲಡಾಖ್‌ನ ದ್ರಾಸ್‌ನಲ್ಲಿರುವ ‘ಕಾರ್ಗಿಲ್ ಯುದ್ಧ ಸ್ಮಾರಕ’ವನ್ನು ತಲುಪಲಿದೆ.
ಪವಿತ್ರ ಮಣ್ಣಿನೊಂದಿಗೆ ಪ್ರಯಾಣ
ಈ ಶೌರ್ಯ ವಿಜಯ್ ಯಾತ್ರೆಯು ಕೇವಲ ಬೈಕ್ Rallyಯಲ್ಲ; ಇದೊಂದು ಭಾವನಾತ್ಮಕ ಪಯಣವಾಗಿರಲಿದೆ. ಯಾತ್ರೆಯಲ್ಲಿ ಸಾಗುವ ಸವಾರರು ಹೊಸದಿಲ್ಲಿಯ ಯುದ್ಧ ಸ್ಮಾರಕದ ಪವಿತ್ರ ಮಣ್ಣನ್ನು ಕಳಶವೊಂದರಲ್ಲಿ ತುಂಬಿಕೊಂಡು ಕಾರ್ಗಿಲ್‌ವರೆಗೆ ಒಯ್ಯಲಿದ್ದಾರೆ. ಇದು ಅಸಂಖ್ಯಾತ ಯುದ್ಧ ವೀರರ ತ್ಯಾಗ ಬಲಿದಾನಗಳ ಸಂಕೇತವಾಗಿದೆ.
Rallyಯು ಚಂಡಿಮಂದಿರ, ರೆಜಾಂಗ್ ಲಾ ಮತ್ತು ಲೇಹ್ ಯುದ್ಧ ಸ್ಮಾರಕಗಳ ಮೂಲಕ ಹಾದುಹೋಗಿ ಜುಲೈ 26ರಂದು ಕಾರ್ಗಿಲ್ ತಲುಪಲಿದೆ. ಮಾರ್ಗಮಧ್ಯೆ, ದೇಶಕ್ಕಾಗಿ ಮಡಿದ ವೀರ ಯೋಧರ ಪತ್ನಿಯರಾದ ‘ವೀರ ನಾರಿಯರ’ ತ್ಯಾಗವನ್ನು ಸ್ಮರಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ʼಕಾರ್ಗಿಲ್ ಗೆಲುವು ನಮ್ಮ ಅಸ್ಮಿತೆಯ ಪ್ರತೀಕʼ – ರಾಜನಾಥ್ ಸಿಂಗ್
ಚಾಲನಾ ಸಮಾರಂಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾರ್ಗಿಲ್ ಯುದ್ಧದಲ್ಲಿ ತ್ರಿವರ್ಣ ಧ್ವಜದ ಗೌರವವನ್ನು ಎತ್ತಿಹಿಡಿದ ಭಾರತೀಯ ಯೋಧರ ಧೈರ್ಯ ಮತ್ತು ಕೆಚ್ಚೆದೆಯ ಹೋರಾಟಕ್ಕೆ ನಮನ ಸಲ್ಲಿಸಿದರು. “ಈ ಐತಿಹಾಸಿಕ ವಿಜಯವು ಭಾರತದ ನೆಲ ಮತ್ತು ಅಸ್ಮಿತೆಯನ್ನು ರಕ್ಷಿಸುವ ದೇಶದ ಅಚಲ ಸಂಕಲ್ಪದ ಸಂಕೇತವಾಗಿದೆ” ಎಂದು ಬಣ್ಣಿಸಿದರು.
ಇದೇ ವೇಳೆ, ಪರಮವೀರ ಚಕ್ರ ಪುರಸ್ಕೃತರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಸಂಜಯ್ ಕುಮಾರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ, ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಸೇರಿದಂತೆ ಹಿರಿಯ ಸೇನಾಧಿಕಾರಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದು, ದೇಶದ ಯುವಜನತೆಗೆ ಕರ್ತವ್ಯ, ಗೌರವ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂದೇಶ ಸಾರಿದರು.
ಜಾವಾ-ಯೆಜ್ಡಿಯಿಂದ ನಮನ
ಭಾರತದ ಧೀರೋದಾತ್ತ ಸೈನಿಕರ ಸ್ಪೂರ್ತಿದಾಯಕ ಕಥೆಗಳನ್ನು ಮೋಟಾರ್‌ಸೈಕಲ್ ಸಮುದಾಯಕ್ಕೆ ಹತ್ತಿರವಾಗಿಸುವ ಉದ್ದೇಶದಿಂದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಸಂಸ್ಥೆಯು 2021ರಲ್ಲಿ ಈ ವಿಶಿಷ್ಟ ಟ್ರಿಬ್ಯೂಟ್ ರೈಡ್ ಅನ್ನು ಪ್ರಾರಂಭಿಸಿತ್ತು. ಇಂದು, ಇದೊಂದು ಹೆಮ್ಮೆಯ ಸಂಪ್ರದಾಯವಾಗಿ ಬೆಳೆದುಬಂದಿದೆ.
ಈ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಕಾರ್ಗಿಲ್ ವೀರರು ಮತ್ತು ಅವರ ಕುಟುಂಬಗಳನ್ನು ಸ್ಮರಿಸುವ ನಮ್ಮ ವಿಶಿಷ್ಟ ಮಾರ್ಗವೇ ಈ ಶೌರ್ಯ ವಿಜಯ್ ಯಾತ್ರೆ. ಸೈನಿಕರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ಪೀಳಿಗೆಗೂ ಅವರ ನೆನಪುಗಳನ್ನು ಜೀವಂತವಾಗಿರಿಸಲು ನಾವು ಬದ್ಧರಾಗಿದ್ದೇವೆ. ಭಾರತೀಯ ಸೇನೆಯೊಂದಿಗೆ ಕೈಜೋಡಿಸಿ ಈ ನಮನ ಸಲ್ಲಿಸುತ್ತಿರುವುದು ನಮಗೆ ಅತೀವ ಹೆಮ್ಮೆಯ ವಿಚಾರ,” ಎಂದು ಸಂತಸ ಹಂಚಿಕೊಂಡರು.
ಈ 1,900 ಕಿ.ಮೀ. ಯಾತ್ರೆಯು ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಮತ್ತು ನೆಮ್ಮದಿಯ ಬದುಕು ನಮ್ಮ ಸೈನಿಕರ ನಿಸ್ವಾರ್ಥ ಬಲಿದಾನದ ಫಲ ಎಂಬುದನ್ನು ಇಡೀ ದೇಶಕ್ಕೆ ಮತ್ತೊಮ್ಮೆ ನೆನಪಿಸಲಿದೆ.





