ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಗೋವಿಂದರಾಜನಗರ ಪೊಲೀಸರಿಂದ ಅತ್ತಿಬೆಲೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಈ ಗುಂಡಾಗಿರಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ, ದೂರು ನೀಡಿದರೂ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಅತ್ತಿಬೆಲೆ ಟೋಲ್ ಬಳಿ ಇನೋವಾ ಮತ್ತು ಸ್ವಿಫ್ಟ್ ಕಾರುಗಳಲ್ಲಿ ಬಂದಿದ್ದ ಗೋವಿಂದರಾಜನಗರ ಪೊಲೀಸರ ತಂಡವು ಎಂಟಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರುಗಳನ್ನು ನಿಲ್ಲಿಸಿಕೊಂಡಿತ್ತು. ಈ ವೇಳೆ, ಬೇಕರಿಗೆ ಬೈಕ್‌ನಲ್ಲಿ ಬಂದಿದ್ದ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್ ಅವರ ಮಗ ಅಲಿಅಜಗರ್ ಖಾನ್‌ನ ಬೈಕ್ ಅಡ್ಡಗಟ್ಟಿ, ಗೋವಿಂದರಾಜನಗರ ಪೊಲೀಸರು ದಾಖಲಾತಿ ಚೆಕ್ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ, ಅಲಿಅಜಗರ್‌ನ ಕತ್ತಿನ ಪಟ್ಟಿಯನ್ನು ಹಿಡಿದು ಹಲ್ಲೆ ಮಾಡಿದರು. “ನನ್ನ ತಂದೆ ಪೊಲೀಸ್” ಎಂದು ಅಲಿಅಜಗರ್ ಹೇಳಿದರೂ, ಗೋವಿಂದರಾಜನಗರ ಪೊಲೀಸರು ಹಲ್ಲೆಯನ್ನು ಮುಂದುವರಿಸಿದರು.
ಈ ವೇಳೆ, ಸ್ಥಳಕ್ಕೆ ಆಗಮಿಸಿದ ಹೆಡ್ ಕಾನ್ಸ್ಟೇಬಲ್ ಅಪ್ರೋಜ್ ಖಾನ್, “ನನ್ನ ಮಗನನ್ನು ಯಾಕೆ ಹೊಡೆಯುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಆದರೆ, ಗೋವಿಂದರಾಜನಗರ ಪೊಲೀಸರು “ನೀನು ಯಾವ ಪೊಲೀಸ್?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೊಬೈಲ್ ಕಿತ್ತುಕೊಂಡು, ಅಪ್ರೋಜ್ ಖಾನ್ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದರು. ಬಳಿಕ, ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಬ್ ಇನ್ಸ್‌ಪೆಕ್ಟರ್ ಗುರುಪ್ರಸಾದ್, ಎಎಸ್‌ಐ ಹನುಮಗೌಡ ಪಾಟೀಲ್, ಕಾನ್ಸ್ಟೇಬಲ್‌ಗಳಾದ ಅರ್ಜುನ್ ಕಾಂಬ್ಳೇ, ಪ್ರಸನ್ನ, ಸುರೇಶ್ ಮತ್ತು ಇತರ ಮೂವರು ಹಲ್ಲೆಮಾಡಿದ್ದಾರೆ.
ದೂರು ದಾಖಲಾತಿಯಲ್ಲಿ ವಿಳಂಬ:
ಅಪ್ರೋಜ್ ಖಾನ್ ಅವರು ಈ ಘಟನೆಯ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಡಿವೈಎಸ್‌ಪಿ ಮೋಹನ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ರಾಘವ್ ಸೇರಿದಂತೆ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ನಡವಳಿಕೆಯಿಂದ ಪೊಲೀಸ್ ಸಿಬ್ಬಂದಿಗೆ ರಕ್ಷಣೆ ನೀಡದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.





