ಬೆಂಗಳೂರು: ಬಾಕಿಯಿರುವ ವಾರ್ಷಿಕ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ನೀಡಿ ಮುಷ್ಕರ ನಡೆಸಲು ಮುಂದಾಗಿದ್ದ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿ ಇದೀಗ ತಮ್ಮ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಆಂಬುಲೆನ್ಸ್ ಸೇವೆ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಜಿವಿಕೆ (GVK) ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ನೌಕರರು ಮುಷ್ಕರದಿಂದ ಹಿಂದೆ ಸರಿದಿದ್ದಾರೆ.
108 ಆಂಬುಲೆನ್ಸ್ ಸಿಬ್ಬಂದಿ ಹಲವು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಬಾಕಿಯಿರುವ ವಾರ್ಷಿಕ ವೇತನ ಪರಿಷ್ಕರಣೆ, ಕೆಲಸದ ಅವಧಿಯ ಬದಲಾವಣೆ ಹಾಗೂ ಮೂರು ಸರದಿ ಪಾಳಿಗಳ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೌಕರರು ನೀಡಿದ್ದರು.
ಈ ಹಿನ್ನೆಲೆ ಮಂಗಳವಾರ ರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು, ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ನಡುವೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ನೌಕರರ ಬೇಡಿಕೆಗಳನ್ನು ಆಲಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಆರೋಗ್ಯ ಕವಚ ಉಪನಿರ್ದೇಶಕ ಪ್ರಭುದೇವ ಗೌಡ ಹಾಗೂ ಗುತ್ತಿಗೆ ಸಂಸ್ಥೆಯ ಕರ್ನಾಟಕ ಮುಖ್ಯಸ್ಥ ಹನುಮಂತಪ್ಪ ಅವರು ನೌಕರರ ಸಂಘದ ನಿಯೋಗದೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಸಿಬ್ಬಂದಿಯ ವೇತನ, ಕೆಲಸದ ಸಮಯ ಮತ್ತು ಪಾಳಿಗಳ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ನೌಕರರ ಪ್ರಮುಖ ಬೇಡಿಕೆಯಾದ ವಾರ್ಷಿಕ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗುತ್ತಿಗೆ ಸಂಸ್ಥೆ ಭರವಸೆ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಪ್ರಸ್ತುತ ಜಾರಿಯಲ್ಲಿರುವ ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವ ಬಗ್ಗೆಯೂ ಸಭೆಯಲ್ಲಿ ಒಪ್ಪಿಗೆ ವ್ಯಕ್ತವಾಗಿದೆ.
ಮೂರು ಪಾಳಿಗಳಲ್ಲಿ ಕೆಲಸದ ವ್ಯವಸ್ಥೆ
ಪ್ರಸ್ತುತ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಇರುವ ಸುದೀರ್ಘ ಕೆಲಸದ ಅವಧಿಯನ್ನು ಬದಲಾಯಿಸಿ, ಮೂರು ಸರದಿ ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಗೆ ತರಲು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ನೌಕರರ ಸಂಘ ತಿಳಿಸಿದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಮೂರು ಪಾಳಿಗಳ ರೀತಿಯಲ್ಲಿ ಕೆಲಸದ ಅವಧಿಯನ್ನು ನಿಗದಿಪಡಿಸುವ ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಸಿಬ್ಬಂದಿಯ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ನಿಗದಿತ ಪಾಳಿಗಳ ಮೂಲಕ ಕಾರ್ಯನಿರ್ವಹಣೆಗೆ ಅನುಕೂಲ ಕಲ್ಪಿಸುವುದು ಈ ಬದಲಾವಣೆಯ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ. ಆದರೆ, ಈ ವ್ಯವಸ್ಥೆಯ ಅಂತಿಮ ರೂಪುರೇಷೆ ಹಾಗೂ ಅನುಷ್ಠಾನದ ಕುರಿತು ಲಿಖಿತ ಭರವಸೆ ದೊರೆತ ಬಳಿಕವೇ ಸ್ಪಷ್ಟತೆ ಸಿಗಲಿದೆ.
ಲಿಖಿತ ಭರವಸೆಗೆ ಒತ್ತಾಯ
ಸಭೆಯ ಬಳಿಕ ಮಾತನಾಡಿದ 108 ಆಂಬುಲೆನ್ಸ್ ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ, ಗುತ್ತಿಗೆ ಸಂಸ್ಥೆ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಹಾಗೂ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
ಆದರೆ, ಮೌಖಿಕ ಭರವಸೆಗೆ ಮಾತ್ರ ಸೀಮಿತವಾಗದೆ ಬುಧವಾರ ರಾತ್ರಿಯೊಳಗೆ ಲಿಖಿತ ಭರವಸೆ ನೀಡಬೇಕು ಎಂದು ನೌಕರರ ಸಂಘ ಒತ್ತಾಯಿಸಿದೆ. ಲಿಖಿತ ಭರವಸೆಯಲ್ಲಿ ವೇತನ ಪರಿಷ್ಕರಣೆ, ಕೆಲಸದ ಸಮಯ ಬದಲಾವಣೆ ಹಾಗೂ ಮೂರು ಪಾಳಿಗಳ ವ್ಯವಸ್ಥೆ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಸ್ಪಷ್ಟತೆ ಇರಬೇಕು ಎಂದು ನೌಕರರು ನಿರೀಕ್ಷಿಸಿದ್ದಾರೆ.
ಲಿಖಿತ ಭರವಸೆ ದೊರೆತ ಬಳಿಕ ಅದರಲ್ಲಿರುವ ಅಂಶಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಂಘದ ಉಪಾಧ್ಯಕ್ಷ ಪರಮಶಿವ ಹೇಳಿದ್ದಾರೆ.





