ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಕದ್ದಿದ್ದ ಚಿನ್ನಾಭರಣ ಪ್ರಕರಣದಲ್ಲಿ ದಾವಣಗೆರೆ ಮೂಲದ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ (25) ಎಂಬಾತನನ್ನು ನೆಲಮಂಗಲ ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 14ರಂದು ನೆಲಮಂಗಲದ ಎಂವಿಎಂ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ, ಮದುಮಗಳು ನಯನ ಅವರ 4 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣ ಕದ್ದ ಘಟನೆ ನಡೆದಿದೆ. ನಯನ ಅವರು ಆಭರಣಗಳನ್ನು ಹೆಣ್ಣಿನ ಕೊಠಡಿಯಲ್ಲಿ ಸೂಟ್‌ಕೇಸಿನಲ್ಲಿ ಇಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಮುಗಿದ ನಂತರ ಆಭರಣಗಳನ್ನು ಪರಿಶೀಲಿಸಿದಾಗ ಕಳವಾಗಿರುವುದು ಬೆಳಕಿಗೆ ಬಂತು.
ಪೊಲೀಸರು ಮಂಟಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿ ದಾವಣಗೆರೆಯ ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಪ್ರಕರಣವನ್ನು ನಯನ ಅವರ ತಂದೆ ವೆಂಕಟೇಶ್ ಅವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
ಈ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಪೊಲೀಸರು ಆರೋಪಿಯಿಂದ ಇನ್ನಷ್ಟು ಮಾಹಿತಿಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಯಿಂದ ಇತರ ಪ್ರಕರಣಗಳ ಕುರಿತಾಗಿಯೂ ಮಾಹಿತಿ ಬಯಲು ಆಗುವ ಸಾಧ್ಯತೆ ಇದೆ.
ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಇನ್ಸ್‌ಪೆಕ್ಟರ್ ಬಿಬಿ ಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಎಸ್ಐ ರಘು ನೇತೃತ್ವದಲ್ಲಿ ಕುಖ್ಯಾತ ಕಳ್ಳ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ ಬಂಧನ ಎಲ್ಲರ ಮೆಚ್ಚುಗೆ ಗಳಿಸಿದೆ.
ಮದುವೆ ಸಂದರ್ಭದಲ್ಲಿ ಎಷ್ಟೇ ಬಿಜಿ ಇದ್ರೂ ತಮ್ಮ ಮೌಲ್ಯಮಾಪನ ವಸ್ತುಗಳನ್ನು ಸೂಕ್ತ ಭದ್ರತೆ ಸ್ಥಳಗಳಲ್ಲಿ ಸುರಕ್ಷಿತವಾಗಿ ಇಡಬೇಕು
ಅನಾಹುತಗಳ ವಿರುದ್ಧ ಸದಾ ಎಚ್ಚರಿಕೆಯಿಂದ ಇರಬೇಕು
ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





