ಬೆಂಗಳೂರು: ಬೆಂಗಳೂರಿನ ದಕ್ಷಿಣ ತಾಲೂಕಿನ ದೊಡ್ಡನಾಗಮಂಗಲದಲ್ಲಿ ಮತ್ತೆ ಜೆಸಿಬಿಗಳ ಗುಡುಗು ಕೇಳಿಬಂದಿದ್ದು, ಅನಧಿಕೃತವಾಗಿ ನಿರ್ಮಿಸಲಾದ ಹಲವು ಮನೆಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಈ ಕಾರ್ಯಾಚರಣೆಯಿಂದಾಗಿ ನೂರಾರು ನಿವಾಸಿಗಳು ಕಣ್ಣೀರಿಟ್ಟಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ, ಪೊಲೀಸ್ ಭದ್ರತೆಯೊಂದಿಗೆ ಈ ಕಾರ್ಯಾಚರಣೆ ನಡೆದಿದೆ. ರಾಯಸಂದ್ರ ಕೆರೆಯ ಸರ್ವೆ ನಂಬರ್ 54ರಲ್ಲಿ ಒಟ್ಟು 52 ಎಕರೆ ವಿಸ್ತೀರ್ಣದ ಜಾಗವಿದ್ದು, ಇದರಲ್ಲಿ 4.22 ಎಕರೆ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಲೇಔಟ್ ನಿರ್ಮಿಸಲಾಗಿತ್ತು. ಈ ಜಾಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು, ಮತ್ತು ನೂರಾರು ಮಂದಿ ಇಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು.
ರಾಮರೆಡ್ಡಿ ಮತ್ತು ಆತನ ತಂಡವು ಈ ಅಕ್ರಮ ಲೇಔಟ್‌ನ್ನು ನಿರ್ಮಿಸಿ, ಬಡವರಿಗೆ ಜಾಗಗಳನ್ನು ಮಾರಾಟ ಮಾಡಿದ್ದರು. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಆದರೆ, ಈ ಅಕ್ರಮ ಕೃತ್ಯದಿಂದಾಗಿ ಇದೀಗ ಈ ಕಟ್ಟಡಗಳನ್ನು ಜಿಲ್ಲಾಡಳಿತವು ಧ್ವಂಸಗೊಳಿಸಿದ್ದು, ನಿವಾಸಿಗಳು ಬೀದಿಗೆ ಬಿದ್ದಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.





