ಬೆಂಗಳೂರು (ಜುಲೈ 2): ಬೆಂಗಳೂರು ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯಲ್ಲಿ ಬೈಕ್ ಜೊತೆಗೆ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬೈಕ್ ಸಮೇತ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಪ್ರತಿಷ್ಠಿತ ಅಜೀಂ ಪ್ರೇಮ್ಜಿ ಕಾಲೇಜಿನ ರಸ್ತೆಯ ಬಳಿ ನಡೆದಿದೆ. ಮೃತ ಯುವಕನ ವಯಸ್ಸು ಸುಮಾರು 20ರಿಂದ 25 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಆತ ಕಾಲೇಜು ವಿದ್ಯಾರ್ಥಿಯಾಗಿರಬಹುದೇ ಎಂಬ ಕೋಣೆಯಲ್ಲಿಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ರಸ್ತೆಯ ಬದಿಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ಬೈಕ್ ಹಾಗೂ ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ. ಇದರಿಂದ ಬೆಚ್ಚಿಬಿದ್ದ ಜನರು ಕೂಡಲೇ ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರದೇಶವನ್ನು ಸುತ್ತುವರೆದು ಪರಿಶೀಲನೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸೋಕೋ ತಂಡ ಹಾಗೂ ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕಾಗಮಿಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಕೈಗೊಂಡಿವೆ. ಬೈಕ್ ನಂಬರ್, ಮೃತನ ಗುರುತು, ಘಟನೆಯ ಸಮಯ, ಹಾಗೂ ಬೆಂಕಿ ಹಚ್ಚಿದ ರೀತಿಯ ಕುರಿತು ಪೊಲೀಸರು ತಾಂತ್ರಿಕ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಯುವಕನನ್ನು ಬೇರೆಡೆ ಕೊಲೆ ಮಾಡಿ ಬಳಿಕ ಬೈಕ್ ಜೊತೆಗೆ ಈ ಪ್ರದೇಶಕ್ಕೆ ತಂದು ಬೆಂಕಿ ಹಚ್ಚಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮತ್ತೊಂದೆಡೆ, ಆತನೇ ಬೈಕ್ ಜೊತೆ ಬೆಂಕಿಗೆ ಆಹುತಿಯಾಗಿದ್ದಾನೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ ದೇಹ ಮತ್ತು ಬೈಕ್ ಎರಡೂ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಮೃತನ ಗುರುತು ಪತ್ತೆಹಚ್ಚುವುದು ಮತ್ತು ನಿಖರ ಕಾರಣ ತಿಳಿಯುವುದು ಪೊಲೀಸರಿಗೆ ಸವಾಲಾಗಿದೆ.
ಈ ಪ್ರಕರಣವು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ವಿಶೇಷವಾಗಿ ಕಾಲೇಜು ರಸ್ತೆಯಂತಹ ಪ್ರದೇಶದಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಮೃತ ಯುವಕನ ಗುರುತು ಪತ್ತೆಯಾದ ಬಳಿಕ ಪ್ರಕರಣದ ದಿಕ್ಕು ಮತ್ತಷ್ಟು ಸ್ಪಷ್ಟವಾಗುವ ಸಾಧ್ಯತೆ ಇದೆ.
ಸದ್ಯ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ, ಆತ್ಮಹತ್ಯೆ ಅಥವಾ ಬೇರೆ ಕಾರಣಗಳ ಕೋಣೆಯಲ್ಲಿ ತನಿಖೆ ಮುಂದುವರಿದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಪ್ರಕರಣದ ನಿಖರ ಸ್ವರೂಪ ತಿಳಿಯುವ ನಿರೀಕ್ಷೆಯಿದೆ.





